ಅಧಿಕಾರಿಗಳ ಕಾರ್ಯನಿರ್ವಹಣೆ ಪಾರದರ್ಶಕವಾಗಿರಲಿ

30 gkp. 01
Published on

ಗೋಣಿಕೊಪ್ಪಲು: ಸರ್ಕಾರಿ ಇಲಾಖೆ ಅಧಿಕಾರಿಗಳು ಪಾರದರ್ಶಕತೆಯಿಂದ ಕರ್ತವ್ಯ ನಿರ್ವಹಿಸುವಂತೆ ಶಾಸಕ ಎ.ಎಸ್.ಪೊನ್ನಣ್ಣ ತಾಲೂಕು ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪೊನ್ನಂಪೇಟೆಯ ಸಾಮರ್ಥ್ಯಸೌಧ ಸಭಾಂಗಣದಲ್ಲಿ ಆಯೋಜಿಸಿದ್ದ 2026-27ನೇ ಸಾಲಿನ ತಾಲೂಕು ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಸಭೆಯಲ್ಲಿ ಮಡಿಕೇರಿ, ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕುಗಳಿಗೆ ಮುಂದಿನ ಸಾಲಿನಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ ಮಾತನಾಡಿದರು. ತಾಲೂಕು ಮಟ್ಟದ ಅಧಿಕಾರಿಗಳು ತರಾತುರಿಯಲ್ಲಿ ನೀಡಿದ ಅಂಕಿ ಅಂಶಗಳು ಒಂದಕ್ಕೊಂದು ಸಂಬಂಧ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮುಂದೆ ನಡೆಯುವ ಸಭೆಗೆ ಸಮರ್ಪಕವಾದ ಅಂಕಿ ಅಂಶಗಳ ಪಟ್ಟಿಯನ್ನು ಸಭೆಯ ಮುಂದಿಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದೇ ಮೊದಲ ಬಾರಿಗೆ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ಸಭೆಗೆ ಪೂರ್ವ ತಯಾರಿ ಇಲ್ಲದೆ, ಅಧಿಕಾರಿಗಳು ಪ್ರತಿ ಪಂಚಾಯಿತಿ ಅಭಿವೃದ್ಧಿ ಯೋಜನೆಗಳ ಬಗ್ಗೆ ಅಂಕಿ ಅಂಶಗಳನ್ನು ನೀಡಿ, ಸಭೆಯ ಅನುಮೋದನೆ ಪಡೆಯಲು ಶಾಸಕರ ಮುಂದೆ ಕರಡು ಪ್ರತಿಯನ್ನು ಮಂಡಿಸಿದ್ದರು. ಕರಡು ಪ್ರತಿಯ ವಿವರಗಳನ್ನು ಪರಿಶೀಲನೆ ಮಾಡುವ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ ಈ ಬಗ್ಗೆ ಶಾಸಕ ಪೊನ್ನಣ್ಣನವರ ಗಮನಕ್ಕೆ ತರುವ ಮೂಲಕ ಅಧಿಕಾರಿಗಳನ್ನು ಪ್ರಶ್ನಿಸಿದರು.

ಈ ವೇಳೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಮಧ್ಯ ಪ್ರವೇಶಿಸಿದ ಶಾಸಕ ಪೊನ್ನಣ್ಣ, ಜಿಲ್ಲಾ ಮಟ್ಟದ ಸಭೆಗೆ ಸರಿಯಾದ ರೀತಿಯಲ್ಲಿ ಕರಡು ಪ್ರತಿಯನ್ನು ಸಲ್ಲಿಸಲು ಸೂಚನೆ ನೀಡಿದರು. ಮಡಿಕೇರಿ, ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ತಾಲೂಕು ಅಭಿವೃದ್ಧಿ ಮತ್ತು ಯೋಜನಾ ಸಮಿತಿ ಸಭೆಯನ್ನು ಶಾಸಕ ಪೊನ್ನಣ್ಣನವರ ಅಧ್ಯಕ್ಷತೆಯಲ್ಲಿ ಜರುಗಿತು.

ಅಂತಿಮವಾಗಿ ಪೊನ್ನಂಪೇಟೆ ತಾಲೂಕಿಗೆ 15 ಕೋಟಿ ರೂ., ವಿರಾಜಪೇಟೆ ತಾಲೂಕಿಗೆ 17 ಕೋಟಿ ರೂ. ಹಾಗೂ ಮಡಿಕೇರಿ ತಾಲೂಕಿಗೆ 37 ಕೋಟಿ ರೂ.ಕರಡು ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಲಾಯಿತು.

ಪ್ರತಿ ಪಂಚಾಯಿತಿಯಲ್ಲಿ ಅಭಿವೃದ್ಧಿ ಯೋಜನೆಗೆ ಪರಿಶಿಷ್ಟ ಜಾತಿ ಹಾಗೂ ಪಂಗಡ ಅಭಿವೃದ್ಧಿಗೆ ಶೇಕಡವಾರು ಅನುದಾನವನ್ನು ಮೀಸಲಿಡಲು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವೈಸ್ ಚೇರ್ ಪರ್ಸನ್ ಬಾಲಚಂದ್ರ ನಾಯರ್, ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲಿರ ಬೋಪಣ್ಣ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ಹಾಲುಗುಂದ ಗ್ರಾಪಂ ಅಧ್ಯಕ್ಷ ಪಂದಿಕಂಡ ದಿನೇಶ್ ಕುಶ, ಪೊನ್ನಂಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಮಡಿಕೇರಿ ತಾಪಂ ಇಒ ಶೇಖರ್, ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net