ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ: ಬಂಡೆ ಕಾರ್ಮಿಕರು, ಗ್ರಾಪಂ ಪ್ರತಿನಿಧಿಗಳಿಂದ ಪ್ರತಿಭಟನೆ

TTH WEB 2
Published on

ತೀರ್ಥಹಳ್ಳಿ: ಮೇಲಿನ ಕುರುವಳ್ಳಿಯ ಬಂಡೆ ಕಾರ್ಮಿಕರು ಶ್ರಮದಿಂದ ಸಿದ್ಧಪಡಿಸಿದ್ದ ಕಲ್ಲುಗಳನ್ನು ಹಾನಿ ಮಾಡಿದ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗ್ರಾಪಂ ಅಧ್ಯಕ್ಷರು, ಸದಸ್ಯರ ನೇತೃತ್ವದಲ್ಲಿ ಬಂಡೆ ಕಾರ್ಮಿಕರು ಮಂಗಳವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಗ್ರಾಪಂ ಸದಸ್ಯ ನಿಶ್ಚಲ್ ಜಾದೂಗಾರ್ ಮಾತನಾಡಿ, ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸುತ್ತಾರೆ. ಏಕಾಏಕಿ ನುಗ್ಗಿ ಬಡ ಕಾರ್ಮಿಕರು ದೇವಸ್ಥಾನ ನಿರ್ಮಾಣಕ್ಕೆ ಸಿದ್ಧಪಡಿಸಿದ್ದ 200 ಕಲ್ಲುಗಳನ್ನು ಪುಡಿ ಮಾಡಿಸಿದ್ದಾರೆ. ಕಾರ್ಮಿಕರ ಸಲಕರಣೆಗಳನ್ನು ಕಿತ್ತುಕೊಂಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವ ಜತೆಗೆ ಹಾನಿ ಪರಿಹಾರವನ್ನೂ ಭರಿಸಬೇಕು ಎಂದು ಆಗ್ರಹಿಸಿದರು.

ಗ್ರಾಪಂ ಉಪಾಧ್ಯಕ್ಷ ಪ್ರಭಾಕರ್ ಮಾತನಾಡಿ, ತಾಲೂಕಿನಲ್ಲಿ ಪ್ರಭಾವಿಗಳಿಂದ ಮರಳು ಕಲ್ಲು ಅಕ್ರಮ ದಂಧೆ ನಡೆಯುತ್ತಿದ್ದರೂ ಕೇಳುವವರಿಲ್ಲ. ಆದರೆ ಶ್ರಮಿಕರಿಗೆ ರಕ್ಷಣೆಯೇ ಇಲ್ಲವಾಗಿದೆ. ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳ ದೌರ್ಜನ್ಯದಿಂದ ನೂರಾರು ವರ್ಷಗಳಿಂದ ಇಲ್ಲಿ ಬದುಕು ಕಟ್ಟಿಕೊಂಡಿದ್ದ ನೂರಾರು ಕುಟುಂಬಗಳು ಇಲ್ಲಿಂದ ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಂಡೆ ಕಾರ್ಮಿಕ ಆನಂದ ಮಾತನಾಡಿ, ಈ ವೃತ್ತಿಯನ್ನೇ ಅವಲಂಬಿಸಿ ಬದುಕುವ ನಾವು ಬಂಡೆಯನ್ನು ಲೀಸ್‌ಗೆ ಕೊಡುವಂತೆ ಕೇಳುತ್ತಿದ್ದೇವೆ. ಆದರೆ ಇಲಾಖೆ ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲವಾಗುವಂತೆ ಕಾರ್ಮಿಕರನ್ನು ವಂಚಿಸುವ ಸಲುವಾಗಿ ನಿಭಂದನೆಗಳನ್ನು ರೂಪಿಸಿ ಲಕ್ಷಾಂತರ ರೂ. ಸ್ಥಿರನಿಧಿ ಕೇಳುತ್ತಿದ್ದಾರೆ ಎಂದೂ ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net