ಅಧಿಕಾರವಲ್ಲ, ರಾಷ್ಟ್ರಪ್ರೇಮ ಶಾಶ್ವತ : ಸಂಸದ ಮುನಿಸ್ವಾಮಿ ಇಂಗಿತ, ಸೈಕಲ್​ ಜಾಥಾದಲ್ಲಿ ಪಾಲ್ಗೊಂಡಿದ್ದವರಿಗೆ ಪ್ರಮಾಣಪತ್ರ ವಿತರಣೆ

1
Published on

ಕೋಲಾರ: ನಗರದ ಗಡಿಯಾರ ಗೋಪುರದ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದು, ಜಿಲ್ಲೆಯ ಜನರಲ್ಲಿ ದೇಶಪ್ರೇಮ ಜಾಗೃತಿ ಮೂಡಿಸುವಂತಾಗಿದೆ. ನಮ್ಮ ಮುಂದಿನ ಗುರಿ ನಗರದೆಲ್ಲೆಡೆ ಸೌಹಾರ್ದಯುತವಾಗಿ ಗಣೇಶ ಹಬ್ಬ ಸೇರಿ ಇತರ ಧಾರ್ಮಿಕ ಆಚರಣೆಗಳನ್ನು ಮಾಡುವುದಾಗಿದೆ ಎಂದು ಸಂಸದ ಮುನಿಸ್ವಾಮಿ ಹೇಳಿದರು.

ನಗರದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸ್ವಾತಂತ್ರ$್ಯ ಅಮೃತ ಮಹೋತ್ಸವ ಪ್ರಯುಕ್ತ ಯುವಮೋರ್ಚಾ ಆಯೋಜಿಸಿದ್ದ ಸೈಕಲ್​ ರ್ಯಾಲಿಯಲ್ಲಿ ಯುವ ರಾಷ್ಟ್ರ ಪೇಮಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಕಾಂಗ್ರೆಸ್​ಗೆ 74 ವರ್ಷದಿಂದ ಸಾಧ್ಯವಾಗದಂತಹ ಕೆಲಸವನ್ನು ಕ್ಲಾಕ್​ಟವರ್​ನಲ್ಲಿ ನಾವು ಮಾಡಿ ತೋರಿಸಿದ್ದೇವೆ. ಇದು ನಮಗೆ ದೊರೆತ ಪ್ರಥಮ ಯಶಸ್ಸಾಗಿದೆ. ಮುಂದಿನ ದಿನಗಳಲ್ಲಿ ಗಣೇಶೋತ್ಸವವನ್ನು ನಗರದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು. ಕ್ಲಾಕ್​ಟವರ್​ ಸೇರಿ ಇತರ ಮಾರ್ಗಗಳಲ್ಲೂ ಮೆರವಣಿಗೆ ನಡೆಸಲಾಗುವುದು. ರಾಜಕಾರಣ, ಅಧಿಕಾರ ಶಾಶ್ವತವಲ್ಲ. ರಾಷ್ಟ್ರಪ್ರೇಮ ಶಾಶ್ವತವಾಗಿ ಉಳಿಯುತ್ತದೆ. ಎಲ್ಲ ಸಮುದಾಯದವರು ಒಗ್ಗಟ್ಟಾಗಿ ಬಾಳಲು ಪಣತೊಡಬೇಕಿದೆ ಎಂದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, 75 ವರ್ಷದ ನಂತರ ಕ್ಲಾಕ್​ ಟವರ್​ನಲ್ಲಿ ತಿರಂಗಾ ಹಾರಾಡುವಂತೆ ಮಾಡಿದ ಕೀರ್ತಿ ಸಂಸದ ಮುನಿಸ್ವಾಮಿ, ಜಿಲ್ಲಾಡಳಿತ ಮತ್ತು ಜಿಲ್ಲೆಯ ಶಾಂತಿಪ್ರಿಯ ಜನರಿಗೆ ಸಲ್ಲಬೇಕು. ಈ ಕಾರ್ಯದಿಂದ ರಾಷ್ಟ್ರೀಯ ಪ್ರಜ್ಞೆ ಮೂಡಿಸಿದಂತಾಗಿದೆ ಎಂದು ಶ್ಲಾಘಿಸಿದರು.

ಯುವಮೋರ್ಚಾ ರಾಜ್ಯಾಧ್ಯಕ್ಷ ಡಾ.ಸಂದೀಪ್​ ಮಾತನಾಡಿ, ಈ ಹಿಂದೆ ಲೋಕಸಭಾ ಸದಸ್ಯರನ್ನು ಕಾಣಲು ದೆಹಲಿಗೆ ಹೋಗಬೇಕಾಗಿತ್ತು. ಆದರೆ ಮುನಿಸ್ವಾಮಿ ಅವರು ಸದಾ ಜನರ ಸಮಸ್ಯೆಗೆ ಸ್ಪಂದಿಸುತ್ತಾ, ಜಿಲ್ಲೆಯಲ್ಲಿ ಜನರ ಕೈಗೆ ಸಿಗುತ್ತಿರುವುದು ಅವರ ಸರಳ ಮತ್ತು ಸಜ್ಜನಿಕೆಗೆ ಸಾಕ್ಷಿಯಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್​, ಕೆಯುಡಿಎ ಅಧ್ಯಕ್ಷ ಓಂಶಕ್ತಿ ಚಲಪತಿ, ಬಿಜೆಪಿ ಮುಖಂಡರಾದ ಸಿ.ಡಿ.ರಾಮಚಂದ್ರ, ಕೆಂಬೋಡಿ ನಾರಾಯಣಸ್ವಾಮಿ, ಯುವಮೋರ್ಚಾ ಅಧ್ಯಕ್ಷ ಶಿವಕುಮಾರ್​, ನಗರ ಘಟಕ ಅಧ್ಯಕ್ಷ ತಿಮ್ಮರಾಯಪ್ಪ ಉಪಸ್ಥಿತರಿದ್ದರು.

ಸ್ವಾತಂತ್ರ$್ಯದ 75 ವರ್ಷದ ಸಂಭ್ರಮ ಪ್ರಯುಕ್ತ ಬೆಂಗಳೂರಿನ ವಿಧಾನಸೌಧದಿಂದ 75 ಕಿ.ಮಿ ಸೈಕಲ್​ ರ್ಯಾಲಿ ಆಯೋಜಿಸಲಾಗಿತ್ತು. ಬೆಂಗಳೂರಿನಲ್ಲಿ 750 ಯುವ ರಾಷ್ಟ್ರಪ್ರೇಮಿಗಳು ಭಾಗವಹಿಸಿದ್ದರು. ಪ್ರಯಾಣ ಮಧ್ಯೆ ಸೈಕಲ್​ ರೂಢಿ ಇಲ್ಲದವರು, ಕಷ್ಟ ಎನಿಸಿದವರನ್ನು ವಾಪಸ್​ ಕಳುಹಿಸಿದ್ದು, ಕೋಲಾರಕ್ಕೆ 450 ಮಂದಿ ತಲುಪಿದರು.

ಬೆಂಗಳೂರು ಗ್ರಾಮಾಂತರದಿಂದ ರಾ.ಹೆದ್ದಾರಿ 75ರ ರಾಮಸಂದ್ರ ಬಳಿ ಜಿಲ್ಲೆಯ ಗಡಿ ಪ್ರವೇಶಿಸುತ್ತಿದ್ದಂತೆ ಸಂಸದ ಮುನಿಸ್ವಾಮಿ ಮತ್ತು ಬಿಜೆಪಿ ಕಾರ್ಯಕರ್ತರು ಸೇರಿಕೊಂಡರು. ಈ ಸಂದರ್ಭದಲ್ಲಿ ಜಾಥಾದಲ್ಲಿ ಬರುತ್ತಿದ್ದವರ ಮೇಲೆ ಹೂಮಳೆಗರೆವ ಮೂಲಕ ಸ್ವಾಗತಿಸಲಾಯಿತು. ನರಸಾಪುರ ಮತ್ತು ಮಾರ್ಗದ ಇತರ ಗ್ರಾಮಗಳ ಬಳಿಯೂ ಜನರು ಪುಷ್ಪವೃಷ್ಠಿ ಮಾಡಿದರು. ನಂತರ ನಗರದಲ್ಲಿ ಸೈಕಲ್​ ಜಾಥಾ 2 ಕಿ.ಮೀ ಸಾಗಿದ್ದು, ತಿರಂಗಾ ಧ್ವಜಗಳು ರಾರಾಜಿಸಿದವು. ಒಟ್ಟಾರೆ ನಗರದಲ್ಲಿ ರಾಷ್ಟ್ರೀಯ ಹಬ್ಬದ ವಾತಾವರಣ ನೆಲೆಸುವಂತೆ ಮಾಡಿತ್ತು. ಬೆಂಗಳೂರಿನಿಂದ ಸಂಸದ ತೇಜಸ್ವಿ ಸೂರ್ಯ ಸೈಕಲ್​ ಜಾಥಾದಲ್ಲಿ ಭಾಗವಹಿಸಿದ್ದುದು ವಿಶೇಷವಾಗಿತ್ತು. ಕೋಲಾರ ಮತ್ತು ಬೆಂಗಳೂರು ಯುವಜನ ತಿರಂಗಾ ಧ್ವಜಗಳೊಂದಿಗೆ ಪಾಲ್ಗೊಂಡಿದ್ದರು.

ಭಾರತ ದರ್ಶನ ಕಾರ್ಯಕ್ರಮದಡಿ 50 ಯುವಜನರನ್ನು ಆಯ್ಕೆ ಮಾಡಿ ದೇಶದ ಇತರ ನಗರಗಳಿಗೆ ಅಧ್ಯಾಯನಕ್ಕಾಗಿ ಕಳುಹಿಸಲಾಗುವುದು. ಜಿಲ್ಲೆಯಿಂದಲೂ 10-ರಿಂದ 15 ಮಂದಿಗೆ ಅವಕಾಶ ಕಲ್ಪಿಸಲಾಗುವುದು. ಜಮ್ಮು, ಕಾಶ್ಮೀರ, ಸಿಕ್ಕಿಂ, ಸೇರಿ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಾಗುವುದು. ತೇಜಸ್ವಿ ಸೂರ್ಯ, ಸಂಸದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net