

ಚಿಕ್ಕಬಳ್ಳಾಪುರ-ಪಾತಪಾಳ್ಯ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬುದು ಸರ್ಕಾರದ ವಿನೂತನ ಕಾರ್ಯಕ್ರಮವಾಗಿದ್ದು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಜನರ ಮನೆಬಾಗಿಲಿಗೆ ಬಂದು ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ರೂಪಿಸಿದ ಮಹೋನ್ನತ ಕಾರ್ಯಕ್ರಮವಾಗಿದೆ ಎಂದು ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಹೋಬಳಿಯ ಸೋಮನಾಥಪುರದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮದ ಕಟ್ಟ ಕಡೆಯ ವ್ಯಕ್ತಿಗೆ ಸರ್ಕಾರದ ಸವಲತ್ತುಗಳನ್ನು ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ತಾವು ಅಧಿಕಾರದಲ್ಲಿದ್ದಾಗ ಜನರಿಗೆ ಸಹಾಯ ಮಾಡಬೇಕು. ಚುನಾವಣೆ ಸಮಯದಲ್ಲಿ ಮಾತ್ರ ರಾಜಕೀಯ ಮಾಡಬೇಕು. ಸರ್ಕಾರದ ಕಾರ್ಯಕ್ರಮ ಮಾಡುವಾಗ ಪಕ್ಷಾತೀತವಾಗಿ ಮಾಡಬೇಕು. ಅಧಿಕಾರಿಗಳು ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸದೆ ಅವರನ್ನು ಪ್ರೀತಿ ವಿಶ್ವಾಸದಿಂದ ಮಾತನಾಡಿಸಿ ಕೆಲಸ ಮಾಡಿಕೊಟ್ಟು ಅವರಿಂದ ಮೆಚ್ಚಿಗೆ ಪಡೆಯಬೇಕು. ಹಾಗಾದಾಗ ಮಾತ್ರ ಜನರು ನಮ್ಮನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ ಎಂದರು.
ನೂತನ ತಾಲೂಕು ಚೇಳೂರಿಗೆ ಶೀಘ್ರದಲ್ಲೇ ಕಚೇರಿ ಹಾಗೂ ಅಧಿಕಾರಿಗಳ ವ್ಯವಸ್ಥೆ ಮಾಡಲಾಗುವುದು. ಸೋಮನಾಥಪುರದಲ್ಲಿ ಪಿಎಚ್‌ಸಿ ಉಪಕೇಂದ್ರ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿ, ಪ್ರತಿ ತಿಂಗಳೂ ಮೂರನೇ ಶನಿವಾರ ಹಳ್ಳಿಗೆ ಭೇಟಿ ನೀಡಿ ಗ್ರಾಮ ವಾಸ್ತವ್ಯ ಮಾಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಇತ್ಯರ್ಥ ಮಾಡಲು ಈ ಕಾರ್ಯಕ್ರಮ ಉಪಯುಕ್ತವಾಗಿದೆ ಎಂದರು.
ಆರತಿ ಬೆಳಗಿ ಸ್ವಾಗತ: ಗ್ರಾಮದ ಅಂಬೇಡ್ಕರ್ ಕಾಲನಿ ಸೇರಿ ಇತರ ಕಾಲನಿಗಳಿಗೆ ಖುದ್ದಾಗಿ ರಸ್ತೆ, ಸ್ವಚ್ಛತೆ ಹಾಗೂ ನೈರ್ಮಲ್ಯ ಕುರಿತು ಪರಿಶೀಲಿಸಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳನ್ನು ಗ್ರಾಮದ ಪ್ರವೇಶ ರಸ್ತೆಯಲ್ಲಿ ಮಹಿಳೆಯರು ಆರತಿ ಬೆಳಗಿ ಸ್ವಾಗತ ಕೋರಿದರು. ಗ್ರಾಮದಲ್ಲಿ ಹಬ್ಬದ ಸಡಗರ, ಸಂಭ್ರಮದ ವಾತಾವರಣ ಮನೆ ಮನೆಗಳಲ್ಲಿ ಕಳೆಗಟ್ಟಿತ್ತು. ನಂತರ ಗ್ರಾಮದ ಮುತ್ತರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ವಿದ್ಯಾರ್ಥಿಗಳೊಂದಿಗೆ ಸಂವಾದ: ಸೋಮನಾಥಪುರದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಸೋಮನಾಥಪುರ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯೆಯನ್ನು ಇಷ್ಟಪಟ್ಟು ಓದಬೇಕು. ಶಿಕ್ಷಣದಿಂದ ಮಾತ್ರ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೆಚ್ಚು ಗಮನವಹಿಸಬೇಕು. ತಮ್ಮ ಸಮಯ ವ್ಯರ್ಥಮಾಡದೆ ಪರೀಕ್ಷೆಗೆ ಕಠಿಣ ಶ್ರಮವಹಿಸಬೇಕು ಎಂದು ಡಿಸಿ ಸಲಹೆ ನೀಡಿದರು.
ವಸ್ತು ಪ್ರದರ್ಶನ ವಿಕ್ಷಣೆ: ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಕೃಷಿ, ರೇಷ್ಮೆ ಹಾಗೂ ತೋಟಗಾರಿಕೆ ಬೆಳೆಗಳ ವಸ್ತು ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜು ಹಾಗೂ ಜಿಲ್ಲಾಧಿಕಾರಿ ಲತಾ ವೀಕ್ಷಿಸಿದರು. ನಂತರ ಆರೋಗ್ಯ ತಪಾಸಣೆ ಶಿಬಿರ, ಪೌಷ್ಟಿಕ ಆಹಾರ ಸಪ್ತಾಹ ಶಿಬಿರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ವತಿಯಿಂದ ಬಾಲ್ಯ ವಿವಾಹ ತಡೆಗಟ್ಟುವಿಕೆ ಜಾಗೃತಿ ಕುರಿತ ಶಿಬಿರದಲ್ಲಿ ಭಾಗವಹಿಸಿದರು.
2012 ಅರ್ಜಿ ವಿಲೇವಾರಿ: ಕಾರ್ಯಕ್ರಮದ ಮೂಲಕ ಈವರೆಗೆ ಸುಮಾರು 2012 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 10,427 ಫಲಾನುಭವಿಗಳಿಗೆ ವಿವಿಧ ರೀತಿ ಸೌಲಭ್ಯಗಳನ್ನು ಕಲ್ಪಿಸಿ ಅವರ ಸಮಸ್ಯೆಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯಿಂದ ಸುಮಾರು 800 ಎಬಿಆರ್‌ಕೆ ಕಾರ್ಡ್ ವಿತರಿಸಲಾಗಿದೆ. ಸೋಮನಾಥಪುರದಲ್ಲಿ ಸುಮಾರು 9 ಸಾವಿರ ಜನ ವಾಸವಿದ್ದಾರೆ. ಈ ಗ್ರಾಮದ ನಿವೇಶನ ರಹಿತರಿಗೆ ನಿವೇಶನ ಹಂಚಿಕೆಗಾಗಿ 30 ಗುಂಟೆ ಜಮೀನು ಗುರುತಿಸಲಾಗಿದೆ. ಕೆಲವು ಕುಟುಂಬಗಳಿಗೆ ಶೀಘ್ರದಲ್ಲೇ ವಿವಿಧ ಆಶ್ರಯ ವಸತಿ ಯೋಜನೆಯಡಿ ನಿವೇಶನ ನೀಡಲಾಗುವುದು. ಜೊತೆಗೆ ಒತ್ತುವರಿಯಾದ ಸ್ಮಶಾನ ಭೂಮಿ ತೆರೆಗೊಳಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಸರ್ಕಾರದ ವಿವಿಧ ಯೋಜನೆಗಳಡಿ 150 ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ 5 ಗರ್ಭಿಣಿಗೆ ಸೀಮಂತ ಮಾಡಲಾಯಿತು.
ಸೋಮನಾಥಪುರ ಗ್ರಾಪಂ ಅಧ್ಯಕ್ಷೆ ರತ್ನಮ್ಮಮಲ್ಲಿರೆಡ್ಡಿ, ಉಪಾಧ್ಯಕ್ಷೆ ಈಶ್ವರಮ್ಮ, ಎಸಿ ಡಾ.ಸಂತೋಷ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಂದಿರಾ ಆರ್.ಕಬಾಡೆ, ತಹಸೀಲಾರ್ ವೈ.ರವಿ, ಪಿಡಿಒ ಶೋಭನ್‌ರೆಡ್ಡಿ, ಗ್ರಾಪಂ ಸದಸ್ಯರು, ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳು, ಆಶಾ, ಅಂಗನವಾಡಿ, ಆರೋಗ್ಯ ಸಹಾಯಕಿಯರು ಇತರರಿದ್ದರು.