

ಕಲಬುರಗಿ: ಸಾಮಾಜಿಕ ಕಾರ್ಯಕರ್ತರು, ವೀರಶೈವ ಲಿಂಗಾಯತ ಸಮಾಜದ ಗೌರವಾನ್ವಿತ ಸ್ವಾಮೀಜಿಗಳಿಗೆ ನಿಂದಿಸಿ, ಧಮ್ಕಿ ಹಾಕುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರದ ಮದದಲ್ಲಿದ್ದು, ವೈಯಕ್ತಿಕವಾಗಿ ನಿಂದಿಸಿರುವುದು ಸ್ವಾಮೀಜಿಗಳ ಬಗ್ಗೆ ಭಯವಿದೆ ಎಂಬುದು ಸ್ಪಷ್ಟವಾಗಿದೆ. ಅವಾಚ್ಯ ಪದ ಬಳಕೆಯನ್ನು ಸಂಸದ ಡಾ.ಉಮೇಶ ಜಾಧವ್ ಖಂಡಿಸಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ಸುಸಂಸ್ಕೃತ ವ್ಯಕ್ತಿ, ಸಚಿವನ ಬಾಯಿಯಿಂದ ಇಂತಹ ಭಾಷೆ ಬರುವುದಿಲ್ಲ. ಇಷ್ಟು ಕೀಳು ಮಟ್ಟದ ರಾಜಕಾರಣ ಶೋಭೆ ತರುವುದಿಲ್ಲ. ಅರ್ಜುನಪ್ಪ ಮಡಿವಾಳ ಪ್ರಕರಣವನ್ನು ಮೂರು ದಿನ ಮುಚ್ಚಿಟ್ಟಿರುವುದೇಕೆ? ಸ್ಪೆಷಲ್ ಬೇಬಿ ಆಫ್ ಪ್ರಿಯಾಂಕ್ ಖರ್ಗೆ ಮಾತಿನ ಧಾಟಿ ಕಾನೂನು ಸುವ್ಯವಸ್ಥೆ ಕಾಪಾಡುವುದಲ್ಲ, ಅಧಿಕಾರದ ಮದ, ಧಮ್ಕಿ ಹಾಕುವಂತ್ತಿದೆ ಎಂದು ಪ್ರಕಟಣೆಯಲ್ಲಿ ಖಂಡಿಸಿದ್ದಾರೆ.
ಸ್ವಾಮೀಜಿ ಮೇಲೆ ರಾಜಕೀಯ ಪ್ರೇರಿತ ಪ್ರಕರಣಗಳು ದಾಖಲಾಗಿವೆ. ಅದನ್ನು ನೀವೆ ಒಪ್ಪಿಕೊಂಡಿದ್ದೀರಿ. ಕಾನೂನು ಹೋರಾಟ ನಡೆದಿದೆ. ಅರ್ಜುನಪ್ಪ ಮಡಿವಾಳ ಸಣ್ಣ ಘಟನೆ ಎನ್ನುವ ಖರ್ಗೆಗೆ ಜನಸಾಮಾನ್ಯರ ಜೀವಕ್ಕೆ ಬೆಲೆ ಇಲ್ಲದಂತೆ ಮಾತನಾಡಿದ್ದಾರೆ. ಇಂತಹ ಗಂಭೀರ ಘಟನೆಯಾದಾಗ ಪೊಲೀಸ್ ಬ್ಲಾಗ್, ವೆಬ್‌ಸೈಟ್, ಮಾಧ್ಯಮ ಗ್ರೂಪ್‌ಗಳಿಗೆ ಎಲ್ಲಿಯೂ ಏಕೆ ಹಾಕಿಕೊಂಡಿಲ್ಲ. ಪ್ರಕರಣ ಮುಚ್ಚಿಡಲು ಯಾರು ಒತ್ತಡ ಹೇರಿದ್ದಾರೆ ಬಹಿರಂಗ ಪಡಿಸಲಿ ಎಂದು ಸಂಸದ ಡಾ.ಜಾಧವ್ ಸವಾಲು ಹಾಕಿದ್ದಾರೆ.
ಕೋಟನೂರ ಘಟನೆಯಲ್ಲಿ ಪ್ರಮುಖ ಆರೋಪಿಗಳು, ಸಚಿವ ಖರ್ಗೆ ಛೇಲಾಗಳಾದ ದಿನೇಶ ದೊಡ್ಡಮನಿ, ಶ್ರೀನಿವಾಸ ದೊಡ್ಡಮನಿಯನ್ನು ಇನ್ನು ಏಕೆ ಬಂಧಿಸಿಲ್ಲ? ನೇರ ಆರೋಪವಿದ್ದರೂ ರಕ್ಷಣೆ ನೀಡುತ್ತಿರುವವರು ಯಾರು? ಎರಡು ಘಟನೆಯಲ್ಲಿ ಬಂಧಿತರಾದ ಮಾಹಿತಿ ಪೊಲೀಸರು ಏಕೆ ಬಹಿರಂಗ ಪಡಿಸುತ್ತಿಲ್ಲ? ಪೊಲೀಸ್ ಇಲಾಖೆ ಏಕೆ ಮೌನ ವಹಿಸಿದೆ ಎಂದು ಪ್ರಶ್ನಿಸಿದ್ದಾರೆ.
ಯಾರೇ ಅಪರಾಧವೆಸದಿಗೂ ನಿರ್ದಾಕ್ಷಿಣ್ಯ ಕ್ರಮ ಎನ್ನುವ ಸಚಿವರ ಕಣ್ಣಿಗೆ ಈ ಘಟನೆಗಳು ಕಾಣುತ್ತಿಲ್ಲವೇ? ೧೦ ತಿಂಗಳಲ್ಲೇ ನಿಮ್ಮ ನಿಜ ಬಣ್ಣ ಬಯಲಾಗಿದೆ. ಅಧಿಕಾರಿಗಳಿಗೆ ತನಿಖೆಗೆ ಮುಕ್ತ ಅವಕಾಶ ನೀಡಿ. ಅವರನ್ನು ನಿಮ್ಮ ಬಾಲಂಗೋಚಿಗಳಾಗಿ ಬೆನ್ನ ಹಿಂದೆ ಕಟ್ಟಿಕೊಂಡು ಓಡಾಡುವುದು ನಿಲ್ಲಿಸಿ. ಶಾಂತಿಯುತ ಜಿಲ್ಲೆ ಮಾಡಲು ಸಮಯ ಕೊಡಿ ಎಂದು ಮನವಿ ಮಾಡಿದ್ದಾರೆ.
ಲಿಂಗಾಯತರ ನಿರ್ನಾಮ ಎಂದಾಗ ಎಲ್ಲಿದ್ದರೂ ಸಚಿವ ಪ್ರಿಯಾಂಕ್ ಖರ್ಗೆ?: ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರ ಎನ್ನುವ ಸ್ಪೆಷಲ್ ಬೇಬಿಯದ್ದು ಧಮ್ಕಿ ಸರ್ಕಾರವಾಗಿದೆ. ಸಚಿವ ಖರ್ಗೆ ಛೇಲಾ ಯಳಸಂಗಿ ವಕೀಲ ದಲಿತ, ಮುಸಲ್ಮಾನರು ಕೂಡಿದರೆ ಲಿಂಗಾತರನ್ನು ನಿರ್ನಾಮ ಮಾಡಿಸುತ್ತೇವೆ, ಕಾಲಿಗೆ ಎರಗಿಸುತ್ತೇವೆ ಎಂದಾಗ ಎಲ್ಲಿ ಹೋಗಿತ್ತು ಇವರ ಸಾಮಾಜಿಕ ಚಿಂತನೆ?. ಇದೀಗ ಲಿಂಗಾಯತ ಸ್ವಾಮೀಜಿಗೆ ಏಕ ವಚನದಲ್ಲಿ ನಿಂದಿಸಿ, ಇಡೀ ಸಮಾಜಕ್ಕೆ ಅಗೌರವ ತೋರುತ್ತಿದ್ದಾರೆ ಎಂದು ಸಂಸದ ಜಾಧವ್ ಖಂಡಿಸಿದ್ದಾರೆ.