ಅಧಿಕಾರಕ್ಕೇರಲು ಮೀಸಲು ಅಸ್ತ್ರ ಪ್ರಯೋಗ ; 3ನೇ ಅವಧಿಗಾದರೂ ಪಾಲಿಕೆ ಆಡಳಿತದ ಚುಕ್ಕಾಣಿ ಹಿಡಿಯಲು ಬಿಜೆಪಿ ಕಸರತ್ತು

Tmk_Palike
Published on

ತುಮಕೂರು : ಮಹಾನಗರ ಪಾಲಿಕೆಯಲ್ಲಿ ಅತೀದೊಡ್ಡ ಪಕ್ಷ ಬಿಜೆಪಿ 3ನೇ ಅವಧಿಗಾದರೂ ಆಡಳಿತ ಚುಕ್ಕಾಣಿ ಹಿಡಿಯಲು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದೆ. ಕಳೆದ ಎರಡು ಅವಧಿಯಲ್ಲಿ ಜೆಡಿಎಸ್-ಕಾಂಗ್ರೆಸ್ ‘ಮೈತ್ರಿ’ ಅಧಿಕಾರ ಹಂಚಿಕೊಂಡಿದ್ದು, ಈ ಬಾರಿ ಶತಾಯಗತಾಯ ಪಾಲಿಕೆ ವಶಕ್ಕೆ ಮೀಸಲು ‘ಅಸ್ತ್ರ ’ ಬಳಸಿಕೊಳ್ಳಲು ಬಿಜೆಪಿ ರಾಜಕೀಯ ತಂತ್ರಗಾರಿಕೆಯಲ್ಲಿ ತೊಡಗಿದೆ.

ಹಾಲಿ ಮೇಯರ್ ಹಾಗೂ ಉಪಮೇಯರ್ ಅವಧಿ ಜ.30ಕ್ಕೆ ಅಂತ್ಯಗೊಳ್ಳಲಿದ್ದು, ಅವಧಿಪೂರ್ಣಗೊಳ್ಳುವ ಒಂದು ತಿಂಗಳು ಮುನ್ನವೇ ಮುಂದಿನ ಅವಧಿಯ ಮೇಯರ್, ಉಪಮೇಯರ್ ಸ್ಥಾನಕ್ಕೆ ಮೀಸಲು ಪ್ರಕಟಿಸಬೇಕು. ಆದರೆ, 2ನೇ ಅವಧಿ ಪೂರ್ಣಗೊಂಡು ಒಂದು ವಾರವಾದರೂ ಇನ್ನೂ ಮೀಸಲು ಪ್ರಕಟಿಸದಿರುವುದು ಹಲವು ಗುಮಾನಿಗಳಿಗೆ ಕಾರಣವಾಗಿದೆ.

ಕೈ-ತೆನೆ ಮೈತ್ರಿಗೆ ಭಂಗ ?: ಪಾಲಿಕೆಯ ಒಟ್ಟು 35 ಸ್ಥಾನಗಳ ಬಲಾಬಲದಲ್ಲಿ ಬಿಜೆಪಿ-12, ಜೆಡಿಎಸ್-10, ಕಾಂಗ್ರೆಸ್-10 ಹಾಗೂ 3 ಪಕ್ಷೇತರ ಸದಸ್ಯರಿದ್ದು ಸರಳ ಬಹುಮತಕ್ಕೆ 18 ಸ್ಥಾನಗಳ ಅಗತ್ಯವಿದೆ. ಹಾಗಾಗಿ, 2019ರ ಮೊದಲ ಅವಧಿಗೆ ಜೆಡಿಎಸ್-ಕಾಂಗ್ರೆಸ್ ಜತೆಗೂಡಿ ಅಧಿಕಾರ ಹಿಡಿದಿದ್ದವು. ಅಧಿಕಾರ ಹಂಚಿಕೆ ಒಪ್ಪದಂತೆ 2ನೇ ಅವಧಿಗೆ ಮೇಯರ್ ಹುದ್ದೆಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟು ಜೆಡಿಎಸ್ ‘ದೋಸ್ತಿ’ ಕಾಪಾಡಿಕೊಂಡಿತು.

ಜೆಡಿಎಸ್-ಕಾಂಗ್ರೆಸ್‌ನ ಮೈತ್ರಿ ಭಗ್ನಗೊಳಿಸಲು ಕಳೆದ 2 ಅವಧಿಯಿಂದಲೂ ಬಿಜೆಪಿ ಯತ್ನ ನಡೆಸಿದೆಯಾದರೂ ಅದು ಕೈಗೂಡಿಲ್ಲ. ಹಾಗಾಗಿ, ಈ ಬಾರಿ ಮೀಸಲು ‘ಅಸ್ತ್ರ ’ ಬಳಸಿ ಈ ಮೈತ್ರಿಗೆ ಭಂಗ ತರಲು ಬಿಜೆಪಿ ರಾಜಕೀಯ ಚದುರಂಗದಾಟಕ್ಕೆ ಅಡಿಯಿಟ್ಟಿದೆ. ಡಿಸೆಂಬರ್‌ನಲ್ಲಿ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಕಾರಣ ಮೀಸಲು ಪ್ರಕಟಿಸಿಲ್ಲ. ಈಗ ಅಧಿಕಾರ ಅವಧಿ ಪೂರ್ಣಗೊಂಡರೂ ಇನ್ನೂ ಮೀಸಲು ಪ್ರಕಟಿಸಿ, ಚುನಾವಣೆ ದಿನಾಂಕ ಘೋಷಿಸದೆ ಇರುವುದರ ಹಿಂದೆ ಬಿಜೆಪಿ ಹಸ್ತಕ್ಷೇಪ ಇದೆ ಎನ್ನಲಾಗಿದೆ.

ಬಿಸಿಎಂಬಿ ಮಹಿಳೆಗೆ ಪಟ್ಟ ?: ರಾಜ್ಯ ಸರ್ಕಾರವನ್ನು ಬಳಸಿಕೊಂಡು ಈ ಬಾರಿ ಮೇಯರ್ ಸ್ಥಾನಕ್ಕೆ ಬಿಸಿಎಂಬಿ ಮಹಿಳೆ ಮೀಸಲು ಘೋಷಿಸಲು ಸ್ಥಳೀಯ ಬಿಜೆಪಿ ಮುಖಂಡರು ತೀವ್ರ ಕಸರತ್ತಿನಲ್ಲಿ ತೊಡಗಿದ್ದಾರೆ. ಬಿಸಿಎಂಬಿ ಮಹಿಳೆ ಮೀಸಲು ನಿಗದಿಯಾದರೆ ಕಾಂಗ್ರೆಸ್, ಜೆಡಿಎಸ್‌ನಲ್ಲಿ ಯಾರೂ ಈ ವರ್ಗಕ್ಕೆ ಸೇರಿದ ಸದಸ್ಯರಿಲ್ಲ. ಹಾಗಾಗಿ, ಸುಲಭವಾಗಿ ಅಧಿಕಾರ ಗದ್ದುಗೆಗೇರಬಹುದೆಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ. ಬಿಸಿಎಂಬಿ ಮಹಿಳೆ ಮೀಸಲು ನಿಗದಿಪಡಿಸಲು ನಗರಾಭಿವೃದ್ಧಿ ಸಚಿವರ ಮೇಲೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಸಂಸದ ಜಿ.ಎಸ್.ಬಸವರಾಜು ಒತ್ತಡಹೇರುತ್ತಿದ್ದು ತುಮಕೂರು, ಮೈಸೂರು ಪಾಲಿಕೆಯ ಮೀಸಲು ನಿಗದಿಯ ಗೊಂದಲ ಏರ್ಪಟ್ಟಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಮೀಸಲು ‘ಅಸ್ತ್ರ’ : 2 ಅವಧಿಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿಯನ್ನು ಪಾಲಿಕೆ ಗದ್ದುಗೆಯಿಂದ ದೂರವಿಡಲು ರಾಜ್ಯ ಸರ್ಕಾರವನ್ನು ಬಳಸಿಕೊಂಡು ಬಿಜೆಪಿ ಮೀಸಲು ‘ಅಸ್ತ್ರ’ ಪ್ರಯೋಗಿಸಲು ಸಿದ್ಧತೆ ನಡೆಸಿದೆ. 3ನೇ ಅವಧಿಗೆ ಮೇಯರ್ ಸ್ಥಾನವನ್ನು ಬಿಸಿಎಂಬಿ ಮಹಿಳೆ ಅಥವಾ ಪರಿಶಿಷ್ಟ ಪಂಗಡಕ್ಕೆ ಮೀಸಲು ಮಾಡಿಸುವ ಯತ್ನ ಬಿಜೆಪಿಯಲ್ಲಿ ನಡೆದಿದೆ. 35 ಸದಸ್ಯರ ಪೈಕಿ ಪರಿಶಿಷ್ಟ ಪಂಗಡದ ಏಕೈಕ ಸದಸ್ಯರಿದ್ದು, 32ನೇ ವಾರ್ಡ್‌ನ ಎಸ್ಟಿ ಮೀಸಲು ಕ್ಷೇತ್ರದಿಂದ ಚುನಾಯಿತರಾಗಿರುವ ಬಿಜೆಪಿಯ ಬಿ.ಜಿ.ಕೃಷ್ಣಪ್ಪಗೆ ಅನಾಯಾಸವಾಗಿ ಮೇಯರ್ ಪಟ್ಟ ಒಲಿಯಲಿದೆ.

ವೀಣಾ, ಮಂಜುಳಾ, ದೀಪಶ್ರೀ ?: ಮೇಯರ್ ಸ್ಥಾನವು ಬಿಸಿಎಂಬಿ ಮಹಿಳೆಗೆ ಮೀಸಲಾದರೆ ಬಿಜೆಪಿಯಲ್ಲಿ ಪ್ರಬಲ ಪೈಪೋಟಿ ಎದುರಾಗಲಿದೆ. 6ನೇ ವಾರ್ಡ್‌ನ ವೀಣಾ, 25ನೇ ವಾರ್ಡ್‌ನ ಕೆ.ಎಸ್.ಮಂಜುಳಾ, 4ನೇ ವಾರ್ಡ್ ಎಚ್.ಎಂ.ದೀಪಶ್ರೀ ಪ್ರಬಲ ಆಕಾಂಕ್ಷಿಗಳಾಗಲಿದ್ದಾರೆ. 35ನೇ ವಾರ್ಡ್‌ನ ನಿರ್ಮಲಾ ಕೂಡ ರೇಸ್‌ನಲ್ಲಿರಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net