

ಪಾಂಡವಪುರ: ಮುಂದಿನ ದಿನಗಳಲ್ಲಿ ಹಳೇ ಮೈಸೂರು ಭಾಗ ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಪ್ರವಾಸ ಮಾಡಿ ಜನರ ಆಶೀರ್ವಾದ ಪಡೆಯುವುದಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮಾಚಹಳ್ಳಿ ಗ್ರಾಮದಲ್ಲಿ ಸ್ಥಾಪಿಸಲಾಗಿರುವ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಪುತ್ಥಳಿಯನ್ನು ಮಂಗಳವಾರ ಅನಾವರಣಗೊಳಿಸಿ ಮಾತನಾಡಿದರು. ಅಧಿಕಾರದ ಸ್ಥಾನಮಾನಕ್ಕಿಂತ ರಾಜ್ಯದ ಜನತೆ ಯಡಿಯೂರಪ್ಪನವರ ಮಗ ಎಂದು ಮನಸ್ಸಿನಲ್ಲಿ ಸ್ಥಾನಮಾನ ಕೊಟ್ಟಿದ್ದಾರೆ, ನನಗೆ ಅಷ್ಟೇ ಸಾಕು. ಹೋದಲೆಲ್ಲ ಮಾಧ್ಯಮದವರು ನನ್ನ ಸ್ಥಾನಮಾನದ ಬಗ್ಗೆ ಪ್ರಶ್ನೆ ಮಾಡುತ್ತಾರೆ. ರಾಜ್ಯದ ಯಾವುದೇ ಮೂಲೆಗೆ ಹೋದರೂ ಜನ ಕಿಕ್ಕಿರಿದು ಸೇರುತ್ತಾರೆ. ಪ್ರೀತಿ, ವಿಶ್ವಾಸದಿಂದ ಆಧರಿಸುತ್ತಾರೆ ಇದಕ್ಕಿಂತ ಮತ್ತ್ಯಾವ ದೊಡ್ಡ ಸ್ಥಾನ ಬೇಕು? ಎಂದರು.
ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ನಾಡಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ದೇಶದ ಯಾವ ರಾಜ್ಯದಲ್ಲೂ ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ, ರೈತರನ್ನು ಗೌರವಿಸುವ ಕೆಲಸ ಮಾಡಲಿಲ್ಲ. ಯಡಿಯೂರಪ್ಪ ಅವರು ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಭಾಗ್ಯಲಕ್ಷ್ಮಿಯೋಜನೆ, ಶಾಲಾ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಉಚಿತ ಬೈಸಿಕಲ್ ಯೋಜನೆ ಜಾರಿಗೆ ತಂದರು. ತಂದೆಯ ರಾಜಕೀಯ ಜೀವನವನ್ನು ಹತ್ತಿರದಿಂದ ನೋಡಿ ಸಾಕಷ್ಟು ತಿಳಿದುಕೊಂಡಿದ್ದು, ಅವರ ಹಾದಿಯಲ್ಲಿ ನಡೆಯುವುದಾಗಿ ತಿಳಿಸಿದರು.
ಡಾ.ಇಂದ್ರೇಶ್ ಅವರು ವೃತ್ತಿಯಲ್ಲಿ ವೈದ್ಯರಾಗಿ ಸಮಾಜಕ್ಕಾಗಿ ಜೀವನ ಮುಡುಪಾಗಿಟ್ಟಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಸಮಾಜವನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡುವುದು ಅಸಾಧ್ಯ. ಆದರೆ ಇಂದ್ರೇಶ್ ಇದನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಇಂತಹವರಿಗೆ ಜನ ಆಶೀರ್ವಾದ ಮಾಡಬೇಕು ಎಂದರು.
ಅಭಿಮಾನಿಯಿಂದ ಹೋರಿ ಗಿಫ್ಟ್ : ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ರಾಜಕೀಯವಾಗಿ ಬೆಳೆಯಲು ದೇವರು ಶಕ್ತಿ ತುಂಬಲಿ ಎಂಬ ಆಶಯದೊಂದಿಗೆ ಮಾಚಹಳ್ಳಿ ಗ್ರಾಮದ ಸ್ವಾಮಿ ಎಂಬುವವರು ವಿಜಯೇಂದ್ರ ಅವರಿಗೆ 50 ಸಾವಿರ ರೂ. ಬೆಲೆಬಾಳುವ ಹೋರಿಯನ್ನು ಉಡುಗೊರೆಯಾಗಿ ನೀಡಿದರು.ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ಮುಖಂಡರಾದ ಸಚ್ಚಿದಾನಂದ, ಎಸ್.ಪಿ.ಸ್ವಾಮಿ, ಟಿ.ಶ್ರೀಧರ್, ಎಲ್.ಅಶೋಕ್ ಇತರರು ಇದ್ದರು.