

ಚಿತ್ರದುರ್ಗ: ಅಧಿಕಾರಕ್ಕಾಗಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಸಂವಿಧಾನ ಅಮಾನತ್ತಿನಲ್ಲಿಟ್ಟು ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದರಿಂದ ಇಡೀ ದೇಶವೇ ಬಂಧಿಖಾನೆಯಾಗಿತ್ತು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಶಿವಯೋಗಿ ಸ್ವಾಮಿ ಹೇಳಿದರು.
ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಚಿತ್ರದುರ್ಗ ಹಾಗೂ ಬಿಜೆಪಿ ಆಶ್ರಯದಲ್ಲಿ ನಗರದ ಕ್ರೀಡಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ ‘ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಕರಾಳ ಇತಿಹಾಸಕ್ಕೆ 50 ವರ್ಷ’ ಕಾರ್ಯಾಗಾರದಲ್ಲಿ ಮಾತನಾಡಿದರು.
ತುರ್ತುಪರಿಸ್ಥಿತಿಯಿಂದ ಪ್ರತಿಪಕ್ಷಗಳ ನಾಯಕರು ಜೈಲು ಸೇರುವಂತಾಯಿತು. ವಿನಾಕಾರಣ ಸಾವಿರಾರು ಜನರು ಕಾರಾಗೃಹದಲ್ಲಿ ಇರುವಂತಾಯಿತು. ಪ್ರಧಾನಿ ನರೇಂದ್ರ ಮೋದಿ ನವೆಂಬರ್ 26ನ್ನು ಸಂವಿಧಾನ ದಿನವೆಂದು ಘೋಷಿಸಿದ್ದಾರೆ. ಅದರಂತೆ ಜೂನ್25ನ್ನು ಸಂವಿಧಾನ ಹತ್ಯೆ ದಿನವೆಂದು ಘೋಷಿಸಬೇಕು ಎಂದರು.
ತುರ್ತುಪರಿಸ್ಥಿತಿ ಕಹಿ ಘಟನೆ ಮೆಲುಕು ಹಾಕುವುದು ಮುಖ್ಯವಾಗಿದೆ. ಸಚಿವ ಡಾ.ಜಿ. ಪರಮೇಶ್ವರ್ ಅವರು ತುರ್ತುಪರಿಸ್ಥಿತಿ ಹೇರಿ 50 ವರ್ಷ ಕಳೆದಿದೆ. ಬಿಜೆಪಿ ಈಗ ಯಾಕೆ ನೆನಪು ಮಾಡಿಕೊಳ್ಳುತ್ತಿದೆ ಎಂದು ಪ್ರಶ್ನಿಸಿದ್ದಾರೆ. ದೇಶ ಸ್ವತಂತ್ರವಾಗಿ 75 ವರ್ಷಗಳಾಗಿವೆ. ಸ್ವಾತಂತ್ರೃ ಬಂದು ಇಷ್ಟು ವರ್ಷಗಳಾದರೂ ಅದನ್ನು ಕಾಂಗ್ರೆಸ್ ಯಾಕೆ ನೆನಪು ಮಾಡಿಕೊಳ್ಳಬೇಕೆಂದು ಪ್ರಶ್ನಿಸಿದರು.
ಚುನಾವಣೆ ಅಕ್ರಮ ಹಿನ್ನೆಲೆಯಲ್ಲಿ 1975 ಜೂನ್12 ರಂದು ಅಲಹಾಬಾದ್ ಹೈಕೋರ್ಟ್ ಇಂದಿರಾ ವಿರುದ್ಧ ತೀರ್ಪು ನೀಡಿದ್ದರೂ ಅಧಿಕಾರಕ್ಕಾಗಿ ಅವರು ಸಂವಿಧಾನವನ್ನು ಅಮಾನತ್ತಿನಲ್ಲಿಟ್ಟು ತುರ್ತು ಪರಿಸ್ಥಿತಿ ಹೇರಿದರು ಎಂದು ನೆನಪಿಸಿದರು.
ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಮಾಜಿ ಅಧ್ಯಕ್ಷ ಎ. ಮುರಳಿ, ಕುಡಾ ಮಾಜಿ ಅಧ್ಯಕ್ಷ ಸುರೇಶ್ ಸಿದ್ದಾಪುರ, ಸಂಪತ್‌ಕುಮಾರ್, ಬಾಳೆಕಾಯಿ ರಾಮದಾಸ್ ಇತರರು ಇದ್ದರು.
ಸಂವಿಧಾನ ವಿರೂಪಗೊಳಿಸಿದ ಇಂದಿರಾ
ನ್ಯಾಯಾಲಯದಲ್ಲಿ ಏನನ್ನೂ ಪ್ರಶ್ನಿಸದಂಥ ಪರಿಸ್ಥಿತಿ ನಿರ್ಮಿಸಿದ ಹಾಗೂ ಸಂವಿಧಾನವನ್ನು ವಿರೂಪಗೊಳಿಸಿದ ಕೀರ್ತಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಸಲ್ಲುತ್ತದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮೂಲ ಸಂವಿಧಾನದಲ್ಲಿ ಸಮಾಜವಾದ, ಜಾತ್ಯಾತೀತ ಎಂಬ ಪದಗಳನ್ನು ಡಾ.ಬಿ.ಆರ್. ಅಂಬೇಡ್ಕರ್ ಸೇರಿಸಿರಲಿಲ್ಲ. ಇವನ್ನು ಸೇರಿಸಿದ್ದು ಕಾಂಗ್ರೆಸ್. ಆರ್‌ಎಸ್ ಎಸ್ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸಮಾಜವಾದ, ಜಾತ್ಯತೀತ ಪದಗಳನ್ನು ಸಂವಿಧಾನ ಪೀಠಿಕೆಯಿಂದ ತೆಗೆಯಬೇಕೆಂದು ಹೇಳದೆ ಈ ಬಗ್ಗೆ ಚರ್ಚೆಯಾಗಲಿದೆ ಎಂದಿದ್ದಾರೆ ಎಂದು ಹೇಳಿದರು.
ದೀನ ದಲಿತರ ಉದ್ಧಾರಕ್ಕಾಗಿ ಬಿಜೆಪಿ ಸಂವಿಧಾನ ತಿದ್ದುಪಡಿ ಮಾಡಿದ್ದರೆ ಇಂದಿರಾಗಾಂಧಿ ಕುಟುಂಬ ಅಧಿಕಾರ ಉಳಿಸಿಕೊಳ್ಳಲು ಸಂವಿಧಾನ ತಿದ್ದುಪಡಿ ಮಾಡಿದೆ ಎಂದರು.