ಅಧಿಕಾರಕ್ಕಾಗಿ ಬರುವವರನ್ನು ನಂಬಬೇಡಿ

IMG-20200927-WA0192
Published on

ಗೌರಿಬಿದನೂರು: ಅಧಿಕಾರ ಬಯಸಿ ಚುನಾವಣೆ ಸಂದರ್ಭದಲ್ಲಿ ನಿಮ್ಮ ಬಳಿಗೆ ಬರುವವರನ್ನು ನಂಬಬೇಡಿ ಎಂದು ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ಹೇಳಿದರು.

ಮುದಗೆರೆಯಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಅಧಿಕಾರ ಪಡೆಯಲು ಚುನಾವಣೆ ಸಂದರ್ಭದಲ್ಲಿ ಕೆಲವರು ಬಿರುಗಾಳಿಯಂತೆ ಬರುತ್ತಾರೆ. ಆದರೆ ಬಿರುಗಾಳಿ ಹೆಚ್ಚು ಸಮಯ ಇರುವುದಿಲ್ಲ. ಜನಸೇವೆ, ಸಮಾಜಸೇವೆ ಎಂಬ ಹೆಸರಿನಲ್ಲಿ ಬಂದು ಸೀರೆ, ಅಕ್ಕಿ ವಿತರಣೆ ಮಾಡುತ್ತಾರೆ. ಅಂತಹವರಿಗೆ ಅಧಿಕಾರ ಮುಖ್ಯ ಎಂದರು.

ನಾವು ಮಾಡಿರುವ ಅಭಿವೃದ್ಧಿ ನಿಮ್ಮ ಕಣ್ಣುಮುಂದಿವೆ. ಗ್ರಾಮೀಣ ಪ್ರದೇಶ ಅಭಿವೃದ್ಧಿಯಾಗಬೇಕಾದರೆ, ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ತಿಳಿಸಿದರು.

ತಾಪಂ ಮಾಜಿ ಉಪಾಧ್ಯಕ್ಷ ಎಚ್.ಎನ್.ಪ್ರಕಾಶ್‌ರೆಡ್ಡಿ ಮಾತನಾಡಿ, ಶಾಸಕರು ಐದು ಬಾರಿ ಸತತವಾಗಿ ಆಯ್ಕೆಯಾಗಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಅಹರ್ನಿಶಿ ದುಡಿಯುತ್ತಿದ್ದಾರೆ. ತಾಲೂಕಿನ ಶೈಕ್ಷಣಿಕ ವಾತಾವರಣ, ಆರ್ಥಿಕ ಮಟ್ಟ ಹೆಚ್ಚಿಸಲು ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡುತ್ತಿದ್ದಾರೆ. ಅವರ ಕೈ ಬಲಪಡಿಸುವ ಕೆಲಸವನ್ನು ನಾವು ಮಾಡಬೇಕು ಎಂದರು.

ಯಾರು ತಡೆಯುತ್ತಾರೆ ನೋಡೋಣ: ಅಲಕಾಪುರ ಸೋಲಾರ್ ಘಟಕಕ್ಕೆ ಕಾನೂನುಬಾಹಿರವಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಸಮುದಾಯಕ್ಕೆ ಸೇರಿರುವ ಜಮೀನನ್ನು ಖರೀದಿಸಿದ್ದು ಈಗಾಗಲೇ ವಿಧಾನಸಭಾ ಕಲಾಪದಲ್ಲಿ ಪ್ರಸ್ತಾಪಿಸಲಾಗಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಜಮೀನನ್ನು ವಾಪಸ್ ಕೊಡಿಸುವವರಿಗೂ ನನ್ನ ಹೋರಾಟ ನಿಲ್ಲುವುದಿಲ್ಲ. ಯಾರು ತಡೆಯುತ್ತಾರೆ ನೋಡೋಣ ಎಂದು ಹೊಸೂರಿನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಾಸಕ ಶಿವಶಂಕರರೆಡ್ಡಿ ಸವಾಲ್ ಹಾಕಿದರು.

ಪಕ್ಷದಿಂದ ಅಧಿಕಾರ ಪಡೆದು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರು ಇಂದು ನಾನು ಜಾತಿ ರಾಜಕಾರಣ ಮಾಡುತ್ತಿರುವುದಾಗಿ ಹಣೆಪಟ್ಟಿ ಕಟ್ಟಿದ್ದಾರೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದ ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷರಾಗಲು ಶ್ರಮಿಸಿದ್ದು ಯಾರು ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ. ಎನ್.ಎಚ್.ಶಿವಶಂಕರರೆಡ್ಡಿ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net