ಅಧಿಕಾರಕ್ಕಾಗಿ ದೇಶ ವಿಭಜನೆ

Published on
ಕೋಲಾರದಲ್ಲಿ ಆಯೋಜಿಸಿದ್ದ ಬಿಜೆಪಿ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಸಂಸದ ಎಸ್​.ಮುನಿಸ್ವಾಮಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್​, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ದಿಶಾ ಸಮಿತಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಅಲ್ಪಸಂಖ್ಯಾತ ಮೋರ್ಚಾ ಮುಖಂಡ ಬೆಗ್ಲಿ ಸಿರಾಜ್​, ತೇಜಸ್​ ವರ್ತೂರು ಪ್ರಕಾಶ್​, ಬಿಜೆಪಿ ತಾಲೂಕು ಅಧ್ಯಕ್ಷ ರಾಮಚಂದ್ರೇಗೌಡ ಇದ್ದರು.
ಕೋಲಾರದಲ್ಲಿ ಆಯೋಜಿಸಿದ್ದ ಬಿಜೆಪಿ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಸಂಸದ ಎಸ್​.ಮುನಿಸ್ವಾಮಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್​, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ದಿಶಾ ಸಮಿತಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಅಲ್ಪಸಂಖ್ಯಾತ ಮೋರ್ಚಾ ಮುಖಂಡ ಬೆಗ್ಲಿ ಸಿರಾಜ್​, ತೇಜಸ್​ ವರ್ತೂರು ಪ್ರಕಾಶ್​, ಬಿಜೆಪಿ ತಾಲೂಕು ಅಧ್ಯಕ್ಷ ರಾಮಚಂದ್ರೇಗೌಡ ಇದ್ದರು.

ಕೋಲಾರ
ಭಾರತ ಅಖಂಡವಾಗಿರುವುದು ಬ್ರಿಟಿಷರಿಗೆ ಇಷ್ಟವಿರಲಿಲ್ಲ. ಇಂತಹ ದುರಾಲೋಚನೆಯಲ್ಲಿ ಅವರಿದ್ದಾಗ ನೆಹರು ಮತ್ತು ಜಿನ್ನಾ ಅಧಿಕಾರಕ್ಕಾಗಿ ದೇಶ ವಿಭಜನೆಗೆ ಕಾರಣರಾದರು ಎಂದು ಸಂಸದ ಎಸ್​.ಮುನಿಸ್ವಾಮಿ ಆರೋಪಿಸಿದರು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತರ ಮೋರ್ಚಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು. ಅಂದು ನೆಹರು, ಜಿನ್ನಾ ತಪ್ಪಿನಿಂದ ಲಕ್ಷಾಂತರ ಹಿಂದು&ಮುಸ್ಲಿಂರು ಭಾರತ ಮತ್ತು ಪಾಕಿಸ್ತಾನಕ್ಕೆ ಮನೆ, ಆಸ್ತಿ ಎಲ್ಲವ ಬಿಟ್ಟು ಮಹಾವಲಸೆ ಮಾಡಬೇಕಾಯಿತು. ಮತಬ್ಯಾಂಕ್​ಗಾಗಿ ಭಾರತ ಛಿದ್ರವಾಗಲು ಕಾರಣವಾದ ಕಾಂಗ್ರೆಸ್​ ಸ್ವಾತಂತ್ರತ್ರ್ಯ ನಂತರ ಮುಸ್ಲಿಂರನ್ನು ಓಲೈಸುತ್ತಾ ಶಿಕ್ಷಣ ಕೊಟ್ಟು ಬಡತನ ದೂರಮಾಡುವ ಕೆಲಸ ಮಾಡಲಿಲ್ಲ. ಆದರೆ ಪ್ರಧಾನಿ ಮೋದಿಯವರು ಉಚಿತ ಅಕ್ಕಿ, ಬೇಟಿ ಬಚಾವೋ, ಬೇಟಿ ಪಡಾವೋ, ಆಯುಷ್ಮಾನ್​ ಭಾರತ್​, ಹೆಣ್ಣು ಮಕ್ಕಳ ಶೋಷಣೆ, ಮಾನ, ಪ್ರಾಣಹಾನಿ ಕಾಪಾಡಲು ತಲಾಕ್​ ನಿಷೇಧದಂತಹ ಹತ್ತು ಹಲವು ಮಹತ್ತರ ನಿರ್ಧಾರಗಳನ್ನು ತೆಗೆದುಕೊಂಡರು ಎಂದರು.
ಮೋದಿ ಟೀಕಿಸುವ ನೈತಿಕತೆಯಿಲ್ಲ: ಪಾಕಿಸ್ತಾನವನ್ನು ಮೋದಿ ಆಳಬೇಕೆಂಬ ಅಭಿಲಾಷೆ ಆ ದೇಶದವರಲ್ಲಿ ಮೂಡುತ್ತಿದೆ ಎಂದರೆ ಭಾರತದ ಮುಸ್ಲಿಂರು ಒಂದಲ್ಲ, ನೂರು ಬಾರಿ ಯೋಚಿಸಬೇಕು. ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ, ಉದ್ಯೋಗ ಕೊಡಿಸದೆ ಅವರನ್ನು ಮುಖ್ಯವಾಹಿನಿಯಿಂದ ದೂರವಿಟ್ಟ ಕಾಂಗ್ರೆಸ್​, ಜೆಡಿಎಸ್​ ಮತ್ತಿತರ ಪಕ್ಷಗಳಿಗೆ ತ್ರಿಬಲ್​ ತಲಾಕ್​ಗೆ ತಿಲಾಂಜಲಿ ನೀಡಿದ ಮೋದಿ ಸರ್ಕಾರವನ್ನು ಟೀಕಿಸುವ ನೈತಿಕತೆಯಿಲ್ಲ ಎಂದು ಸಂಸದರು ಹೇಳಿದರು.
ಸೋಲಿಸಿಯೇ ಸಿದ್ಧ : ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸಲು ಭಯಪಡುವ ಸಿದ್ದರಾಮಯ್ಯ ಯಾವ ಸೀಮೆ ನಾಯಕ? ಬಾದಾಮಿಯಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದರೆ ಕೋಲಾರಕ್ಕೆ ವಲಸೆ ಬರುವ ಪ್ರಮೇಯವೇನಿತ್ತು? ಬರಲಿ, ಅವರನ್ನು ಇಲ್ಲಿ ಸೋಲಿಸದಿದ್ದರೆ ನಾವು ಕೋಲಾರದ ಮಕ್ಕಳೇ ಅಲ್ಲ ಎಂದು ಸಂಸದ ಮುನಿಸ್ವಾಮಿ ಘೋಷಿಸಿದರು.

ತಾಕತ್ತಿದ್ದರೆ ಅಭ್ಯರ್ಥಿ ಹಾಕಿ: ಕೋಲಾರದ ಎಪಿಎಂಸಿ ಬಳಿ ವೃತ್ತಕ್ಕೆ ಮಾಜಿ ರಾಷ್ಟ್ರಪತಿ ದಿ.ಅಬ್ದುಲ್​ ಕಲಾಂ ಹೆಸರಿಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ಎಸ್​ಡಿಪಿಯವರು ತಾಕತ್ತಿದ್ದರೆ ಕೋಲಾರದಲ್ಲಿ ಅಭ್ಯರ್ಥಿ ಹಾಕಲಿ. ಇನ್ನು ನಗರದಲ್ಲಿ ನಿತ್ಯ ಕಾಂಗ್ರೆಸ್​, ಜೆಡಿಎಸ್​ ನಾಯಕರು ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದರೂ ನಗರಸಭೆಯಲ್ಲಿ ದರ್ಬಾರ್​ ನಡೆಸುತ್ತಿರುವ ಮುಬಾರಕ್​, ಕಾಂಗ್ರೆಸ್​ ನಾಯಕರಾದ ರಮೇಶ್​ ಕುಮಾರ್​, ಕೆ.ಶ್ರೀನಿವಾಸಗೌಡ ಚಕಾರವೆತ್ತುತ್ತಿಲ್ಲ. ಬಡ ಮುಸ್ಲಿಂ ಮಹಿಳೆಯರು ಸಮರ್ಪಕ ದಾಖಲೆ ಸಲ್ಲಿಸಿದರೆ ಸರ್ಕಾರದಿಂದ ಗುಡಿಕೈಗಾರಿಕೆಗೆ 15ದಿನದಲ್ಲಿ 50ಸಾವಿರ ಸಾಲ, ಹೊಲಿಗೆ ಯಂತ್ರ ಕೊಡಿಸಲಾಗುವುದು. ನಿವೇಶನ ಕೊಡಿಸಲು ಸಹ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಂಸದ ಮುನಿಸ್ವಾಮಿ ಭರವಸೆ ನೀಡಿದರು.

ಮುಂದಿನ ತಿಂಗಳು ಅಲ್ಪಸಂಖ್ಯಾತರ ಬೃಹತ್​ ಸಮಾವೇಶ: ಮಾಜಿ ಸಚಿವ ವರ್ತೂರು ಪ್ರಕಾಶ್​ ಮಾತನಾಡಿ, ಉಚಿತ ಅಕ್ಕಿ ಕೊಟ್ಟಿದ್ದು ನಾನು ಎನ್ನುವ ಸಿದ್ದರಾಮಯ್ಯಗೆ ಕೇಂದ್ರವು ಅಕ್ಕಿಗೆ 28 ರೂ. ಕೊಟ್ಟಿದ್ದು, ರಾಜ್ಯ ಸರ್ಕಾರ ಕೊಟ್ಟಿದ್ದು ಗೋಣಿ ಚೀಲ ಎಂಬ ಅರಿವಿರಬೇಕು. ನಾನೆಂದೂ ಮುಸ್ಲಿಂರ ಮತ ಬೇಡವೆಂದು ಹೇಳಿಲ್ಲ. ಕೆಲವರು ನನ್ನ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ. ನನ್ನನ್ನು ಮೊದಲ ಬಾರಿ ಗೆಲ್ಲಿಸಿದ್ದೇ ಮುಸ್ಲಿಮರು. ಕೋಲಾರ ಕ್ಲಾಕ್​ಟವರ್​ನಲ್ಲಿ ಸಂಸದರು ಹಾರಿಸಿದ್ದು ಭಾರತದ ಬಾವುಟವೇ ಹೊರತು ಪಾಕ್​ ಧ್ವಜವಲ್ಲ. ಮೋದಿಯವರೇ ಅಲ್ಪಸಂಖ್ಯಾತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಮುಂದಿನ ತಿಂಗಳು ಕೋಲಾರದಲ್ಲಿ 10 ಸಾವಿರ ಮಂದಿ ಅಲ್ಪಸಂಖ್ಯಾತರ ಬೃಹತ್​ ಸಮಾವೇಶ ಮಾಡಲಾಗುವುದು ಎಂದರು.

5 ಲಕ್ಷದವರೆಗೂ ಉಚಿತ ಚಿಕಿತ್ಸೆ ನೀಡುವ ಆಯುಷ್ಮಾನ್​ ಕಾರ್ಡ್​, 135 ಕೋಟಿ ಜನರಿಗೆ ಉಚಿತ ಕೋವಿಡ್​ ಲಸಿಕೆ, ಕಾಶ್ಮೀರದಲ್ಲಿ 370ನೇ ವಿಧಿ ತೆಗೆದು ಅಲ್ಲಿನ ಜನರ ನೆಮ್ಮದಿಬದುಕಿಗೆ ನೆರವಾಗಿದ್ದು, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 1400 ಕೋಟಿ ರೂ.ವೆಚ್ಚದಲ್ಲಿ ಶುದ್ಧ ನೀರಿನ ಘಟಕಗಳನ್ನು ನೀಡಿದ್ದು, ಬೀದಿಬದಿ ವ್ಯಾಪಾರಿಗಳಿಗೆ 50 ಸಾವಿರ ಸಾಲ ನೀಡಿದ್ದು ಎಲ್ಲವೂ ಮೋದಿಯವರೇ ಎಂದು ಸಂಸದ ಹೇಳಿದರು.
ಪಕ್ಷ ಸೇರ್ಪಡೆ: ಸುಲ್ತಾನ್​ ತಿಪ್ಪಸಂದ್ರದ ಮುಸ್ಲಿಂ ಮುಖಂಡರಾದ ರಿಜ್ವಾನ್​ ಪಾಷಾ, ವೆಲ್ಡರ್​ ಶಬೀರ್​ ಮತ್ತಿತರರು ಬಿಜೆಪಿ ಸೇರ್ಪಡೆಯಾದರು.
ನಗರಾಧ್ಯಕ್ಷ ತಿಮ್ಮರಾಯಪ್ಪ, ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್​.ವೆಂಕಟೇಶ್​, ಮಾಜಿ ಸದಸ್ಯೆ ರೂಪಶ್ರೀ, ಬಂಕ್​ ಮಂಜುನಾಥ್​, ಸೂಲೂರು ಆಂಜಿನಪ್ಪ, ಕೆಂಬೋಡಿ ನಾರಾಯಣಸ್ವಾಮಿ, ಅಲ್ಪಸಂಖ್ಯಾತ ಮೋರ್ಚಾ ನಗರಾಧ್ಯಕ್ಷ ಸಾಧಿಕ್​, ನವೀನ್​, ಮುಖಂಡರಾದ , ಸೈಯದ್​ ಸಲಾಂ, ಜಾಮೀನುಲ್ಲಾಖಾನ್​, , ಜಾವಿದ್​, ಮೆಹಬೂಬ್​, ಮುನೀರ್​, ಜಾಮೀದ್​ಖಾನ್​, ನಗೀನಾ ಭಾನು, ಮಮತಾ, ಸೈಯದ್​ ರಿಯಾಜ್​, ಎಸ್ಸಿಮೋರ್ಚಾ ವೆಂಕಟೇಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net