ಅಧಿಕಾರಕ್ಕಾಗಿ ಒಂದು ವರ್ಗದವರ ಬಗ್ಗೆ ಭಯ ಸೃಷ್ಟಿ: ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ವಿಷಾಧ

8
Published on

ಮೈಸೂರು: ಒಂದು ಸಮುದಾಯದ ಬಗ್ಗೆ ಭಯ ಉಂಟು ಮಾಡಿ ಅಧಿಕಾರ ಪಡೆಯುವುದು ಎಂದೂ ವಿಫಲವಾಗದ ರಾಜಕೀಯ ತಂತ್ರವಾಗಿದ್ದು, ಅದು ಈಗಲೂ ಮುಂದುವರಿದಿದೆ ಎಂದು ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣ ಸ್ವಾಮಿ ಬೇಸರ ವ್ಯಕ್ತಪಡಿಸಿದರು.
ನಿರಂತರ ಫೌಂಡೇಶನ್ ಮತ್ತು ಅಭಿರುಚಿ ಪ್ರಕಾಶನದ ಸಹಯೋಗದಲ್ಲಿ ಮಾನಸಗಂಗೋತ್ರಿಯ ಇಎಂಎಂಆರ್‌ಸಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವಕಿ ಧರ್ಮಿಷ್ಟೆ ಅವರ ಎಲಿ ವೈಸಲ್‌ನ ಆತ್ಮಕತೆ ‘ದಿ ನೈಟ್’ನ ಕನ್ನಡ ಅನುವಾದ ಕೃತಿ ‘ದೇವರು ಎದ್ದು ಹೋದ ದಿನ’ ಬಿಡುಗಡೆ ಮಾಡಿ ಮಾತನಾಡಿದರು.
ಅಧಿಕಾರ ಪಡೆಯಲು ಒಂದು ವರ್ಗದವರನ್ನು ಭಯಪಡಿಸುವುದು ಹಿಂದಿನಿಂದಲೂ ನಡೆದು ಬಂದಿದೆ. ಯಹೂದಿಗಳು ಇರುವುದರಿಂದ ನಮ್ಮ ಜನರು ನರಳುತ್ತಿದ್ದಾರೆ. ನಮ್ಮ ದೇಶದ ಆರ್ಥಿಕತೆ ಕುಂಠಿತವಾಗಿದೆ. ನಮ್ಮ ಕಷ್ಟಗಳಿಗೆ ಯಹೂದಿಗಳೇ ಕಾರಣ ಎಂದು ಹಿಟ್ಲರ್ ದಾಳ ಉರುಳಿಸಿದ್ದ. ಇದನ್ನು ನಂಬಿದ ಆ ದೇಶದ ಜನರು ಹಿಟ್ಲರ್ ನಮ್ಮ ರಕ್ಷಣೆಗೆ ಬಂದಿದ್ದಾನೆ ಎಂದು ನಂಬಿ ಯಹೂದಿಗಳ ವಿರುದ್ಧ ದ್ವೇಷ ಬೆಳೆಸಿಕೊಂಡು ಅವರ ಮಾರಣಹೋಮಕ್ಕೆ ಮುಂದಾದರು ಎಂದರು.
ಈಗ ನಮ್ಮ ದೇಶದಲ್ಲಿಯೂ ಇಂತಹ ಪರಿಸ್ಥಿತಿ ಬೇರೆ ರೂಪದಲ್ಲಿ ಬಂದಿದೆ. ಬಲಿಪಶುಗಳಾಗಿದ್ದ ವರ್ಗದವರು ಅಧಿಕಾರ ಪಡೆಯುವ ಅವಕಾಶ ಬರುತ್ತಿದ್ದಂತೆ, ಬಲಿಷ್ಠರು ಮತ್ತಷ್ಟು ಕ್ರೂರಿಗಳಾಗುವ ಈ ದುರಂತಕ್ಕೆ, ವೈಪರಿತ್ಯಕ್ಕೆ ತಪ್ಪಿಸಿಕೊಳ್ಳುವ ದಾರಿ ಏನಿದೆ ಎಂಬ ಪ್ರಶ್ನೆಯನ್ನು ‘ದೇವರು ಎದ್ದು ಹೋದ ದಿನ’ ಪುಸ್ತಕ ಹುಟ್ಟು ಹಾಕುತ್ತದೆ ಎಂದು ತಿಳಿಸಿದರು.
ದೇವರು ಯಾವಾಗ ಅಧಿಕಾರಕ್ಕೆ ಆಯುಧವಾಗುವುದೋ ಅವತ್ತೇ ಹಿಂಸೆಯೂ ಶುರುವಾಗುತ್ತದೆ. ಸಭ್ಯ, ಮೃದುಭಾಷಿ ಹನುಮಂತನನ್ನು ಈಗ ಉಗ್ರ ರೂಪಿಯನ್ನಾಗಿ ಮಾಡಲಾಗಿದೆ. ರಾಮನನ್ನು ಬಿಲ್ಲು ಬಾಣ ಹಿಡಿದು ಯುದ್ಧಕ್ಕೆ ಹೊರಟವನ ರೀತಿ ಮಾಡಿಕೊಳ್ಳಲಾಗಿದೆ. ಎಲ್ಲ ದೇವರನ್ನು ಆ ದೇವರ ಆಯುಧದಿಂದ ಗುರುತಿಸುವಂತಾಗಿದೆ ಎಂದರು.
ನಮ್ಮ ಮೇಲೆ ಹಿಂಸೆ ಎರಗುತ್ತಿದೆ. ನಮ್ಮ ದೇಶವೇ ಹಾಳಾಗುತ್ತಿದೆ ಎಂಬುದು ಗೊತ್ತಿದ್ದರೂ ಅದನ್ನು ನಂಬುವುದಕ್ಕೆ ನಮ್ಮ ಮನಸ್ಸು ತಯಾರಾಗುವುದಿಲ್ಲ. ಎಚ್ಚರಿಕೆ ಗಂಟೆಗಳು ಎಷ್ಟಿದ್ದರೂ ನಮಗೇನೂ ಆಗಲ್ಲ, ಎಲ್ಲೋ ಆಗುತ್ತಿದೆ ಎನ್ನುವ ಭಾವನೆ ಬಂದಿದೆ. ನಾವು ಆ ಪಕ್ಷದವರಲ್ಲ ನಮಗೇನೂ ಮಾಡುವುದಿಲ್ಲ ಎಂಬ ಭ್ರಮೆಗಳಲ್ಲಿ ಕಾಲ ಕಳೆಯುತ್ತೇವೆ. ಆದರೆ ಸ್ವತಃ ನಮಗೆ ಕಷ್ಟವಾದಾಗ ಎಚ್ಚರವಾಗುತ್ತದೆ ಎಂದು ಹೇಳಿದರು.
ಲೇಖಕ ಆರಿಫ್ ರಾಜಾ ಮಾತನಾಡಿ, ಅಧಿಕಾರಕ್ಕಾಗಿ ಕಾಲಕ್ಕೆ ತಕ್ಕಂತೆ ಮೌಲ್ಯಗಳನ್ನು ಬದಲಿಸಿಕೊಳ್ಳುತ್ತಿರುತ್ತಾರೆಯೋ ಅವರು ಎಲ್ಲ ಕಾಲಗಳಲ್ಲಿಯೂ ಒಬ್ಬರನ್ನು ನಾಯಕನನ್ನಾಗಿ ಮತ್ತೊಬ್ಬರನ್ನು ಕಳ ನಾಯಕರನ್ನಾಗಿ ಮಾಡಿಕೊಂಡೇ ಬರುತ್ತಿದ್ದಾರೆ. ಆಧಾತ್ಮ ಮತ್ತು ಧರ್ಮದ ನಡುವೆ ವ್ಯತ್ಯಾಸ ಇದ್ದರೂ, ಅಧಿಕಾರದ ಲಾಲಸೆಗಾಗಿ ಅವುಗಳನ್ನು ಸಮ್ಮಿಲನಗೊಳಿಸಲಾಗುತ್ತಿದೆ ಎಂದರು.
ರಂಗಕಲಾವಿದ ಪ್ರಸಾದ್ ಕುಂದೂರು, ಲೇಖಕಿ ದೇವಕಿ ಧರ್ಮಿಷ್ಟೆ, ಪ್ರಕಾಶಕ ಅಭಿರುಚಿ ಗಣೇಶ್ ಇತರರು ವೇದಿಕೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net