ಅಧಿಕಾರ ಸ್ವೀಕರಿಸಿದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು

ಅಧಿಕಾರ ಸ್ವೀಕರಿಸಿದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು
Published on

ಹಾಸನ: ಹಾಸನ ನಗರಸಭೆ ಅಧ್ಯಕ್ಷರಾಗಿರುವ ಎಂ. ಚಂದ್ರೇಗೌಡ ಮತ್ತು ಉಪಾಧ್ಯಕ್ಷೆ ಲತಾದೇವಿ ಶುಕ್ರವಾರ ಮಧ್ಯಾಹ್ನ ತಮ್ಮ ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ತಮ್ಮ ಸ್ಥಾನದ ಕುರ್ಚಿಯ ಮೇಲೆ ಕುಳಿತು ಅಧಿಕಾರ ಸ್ವೀಕರಿಸಿದರು.
ತಮ್ಮ ಸ್ಥಾನದಲ್ಲಿ ನಗರಸಭೆ ನೂತನ ಅಧ್ಯಕ್ಷರು ಕುಳಿತುಕೊಳ್ಳುತ್ತಿದ್ದಂತೆ ನಗರಸಭೆ ಸದಸ್ಯರು, ಜೆಡಿಎಸ್ ಮುಖಂಡರು ಹಾಗೂ ಅಪಾರ ಅಭಿಮಾನಿಗಳು ಶಾಲು ಹೊದಿಸಿ, ಹಾರ ಹಾಕಿ ಸಿಹಿ ತಿನಿಸುವುದರ ಮೂಲಕ ಶುಭ ಹಾರೈಸಿದರು.
ನಂತರ ಸುದ್ದಿಗಾರರೊಂದಿಗೆ ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ಮಾತನಾಡಿ, ನನ್ನ ಪಾಲಿಗೆ ಅಧ್ಯಕ್ಷ ಪದವಿ ಸಿಕ್ಕಿರುವುದಕ್ಕೆ ತುಂಬಾ ಸಂತೋಷ ತಂದಿದೆ. ಈ ಸಂದರ್ಭದಲ್ಲಿ ನಮ್ಮ ತಂದೆ ಮೈಲಾರಿಗೌಡರನ್ನು ನೆನಪು ಮಾಡಿಕೊಂಡು ಈ ಸ್ಥಾನದಲ್ಲಿ ಕೂತಿದ್ದೇನೆ. ಮುಖ್ಯವಾಗಿ ದಿ. ಎಚ್.ಎಸ್. ಪ್ರಕಾಶ್, ಎಚ್.ಡಿ. ದೇವೇಗೌಡರು, ಕುಮಾರಸ್ವಾಮಿ, ಶಾಸಕ ಸ್ವರೂಪ್, ರೇವಣ್ಣ ಇವರೆಲ್ಲರ ಸಹಕಾರದಿಂದ ಈ ಸ್ಥಾನ ದೊರಕಿದೆ. ಪಕ್ಷಕ್ಕಾಗಿ ದುಡಿದಿದ್ದರಿಂದ ಇಂದು ಫಲ ನೀಡಿದೆ. ಜೆಡಿಎಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೂ ಅಧಿಕಾರ ಸಿಗುತ್ತದೆ ಎಂಬುದಕ್ಕೆ ನಾನೇ ಉದಾಹರಣೆ. ಇದನ್ನು ಉಪಯೋಗಿಸಿಕೊಂಡು ಉತ್ತಮ ಸಮಾಜ ಕಟ್ಟುವಲ್ಲಿ ನಿರತನಾಗುತ್ತೇನೆ ಎಂದರು.
ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ, ವಿದ್ಯುತ್, ಚರಂಡಿ, ಕಸದ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳಿವೆ. ಪ್ರತಿ ಸಮಸ್ಯೆಗಳ ಬಗ್ಗೆ ಅಂತ ಹಂತವಾಗಿ ಗಮನಹರಿಸಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸ್ವಚ್ಛತೆ ಹಾಗೂ ಗುಂಡಿಮುಕ್ತ ಹಾಸನ ನಗರ ನಿರ್ಮಾಣ ನನ್ನ ಪ್ರಮುಖ ಧ್ಯೇಯವಾಗಿದ್ದು, ಅಧಿಕಾರ ಸ್ವೀಕಾರ ಮಾಡಿದ ದಿನದಿಂದಲೇ ಕೆಲಸ ಕಡೆ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದರು.
ಇದೆ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ನಗರಸಭೆ ಸದಸ್ಯ ಅಮೀರ್ ಜಾನ್, ಮಂಜುನಾಥ್, ಯೋಗೇಂದ್ರ, ಬೊಮ್ಮೇಗೌಡ, ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net