ಅಧಿಕಾರ ಸಿಕ್ಕರೆ ಮತ್ತಷ್ಟು ಜನರ ಕಾರ್ಯ

26M.D.R.1
Published on


ಮಂಡ್ಯ : ಸಮಾಜಸೇವೆಯ ಮೂಲಕ ತಾಲೂಕಿನಲ್ಲಿ ಮನೆ ಮಾತಾಗಿರುವ ಕಾಂಗ್ರೆಸ್ ಅಭ್ಯರ್ಥಿ ಕದಲೂರು ಕೆ.ಎಂ.ಉದಯ್ ಅವರನ್ನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮನವಿ ಮಾಡಿದರು.

ಮದ್ದೂರು ತಾಲೂಕಿನ ಆತಗೂರು ಹೋಬಳಿಯ ಗೊಲ್ಲರದೊಡ್ಡಿ ಗ್ರಾಮದ ಶ್ರೀ ಕೃಷ್ಣ ದೇವಾಲಯ (ಶ್ರೀ ಜುಂಜಪ್ಪ) ದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಿ ನಂತರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.


ಕೆ.ಎಂ.ಉದಯ್ ಅವರು ತಾಲೂಕಿನಲ್ಲಿ ಹಲವಾರು ರೀತಿಯ ಸಮಾಜ ಸೇವೆ ಮಾಡುವ ಮೂಲಕ ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಇವರು ಮಾಡುವ ಸಮಾಜ ಸೇವೆಯ ಜತೆಗೆ ಅಧಿಕಾರ ಸಿಕ್ಕಿದರೆ ಮತ್ತಷ್ಟು ಜನಪರ ಕೆಲಸ ಮಾಡಲು ಅನುಕೂಲವಾಗುತ್ತದೆ. ಆದ್ದರಿಂದ, ಚುನಾವಣೆಯಲ್ಲಿ ಇವರನ್ನು ಗೆಲ್ಲಿಸುವ ಮೂಲಕ ನಿಮ್ಮ ಸೇವೆ ಮಾಡಲು ಅವಕಾಶ ನೀಡಬೇಕು ಎಂದರು.


ಪ್ರಪಂಚದಲ್ಲೇ ಅತಿ ಶ್ರೇಷ್ಠವಾದ ನಮ್ಮ ಸಂವಿಧಾನವನ್ನು ಬಿಜೆಪಿಯವರು ಬದಲಾವಣೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್ ಕೂಡ ಇಂತಹ ಹೇಳಿಕೆಯನ್ನು ವಿರೋಧಿಸದೆ ಆ ಪಕ್ಷಕ್ಕೆ ಜೆಡಿಎಸ್ ಕೂಡ ಬೆಂಬಲವಾಗಿ ನಿಂತಿದೆ ಎಂದು ಕಿಡಿಕಾರಿದರು.


ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಉದಯ್ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ತಾಲೂಕಿನಲ್ಲಿ ಕ್ಷೇತ್ರದ ಮತದಾರರು ನನಗೆ ಅಶೀರ್ವಾದ ಮಾಡಿದರೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುವುದಾಗಿ ಭರವಸೆ ನೀಡಿದರು.


ಗೊಲ್ಲರದೊಡ್ಡಿ, ಚಾಕನಕೆರೆ, ಮಲ್ಲನಕುಪ್ಪೆ, ಸಿದ್ದೇಗೌಡನದೊಡ್ಡಿ, ಹರಕನಹಳ್ಳಿ, ಅಂಕನಾಥಪುರ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಬಿರುಸಿನ ಮತಪ್ರಚಾರ ಮಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ, ಕೆಪಿಸಿಸಿ ಸದಸ್ಯ ಕದಲೂರು ರಾಮಕೃಷ್ಣ, ಕೆಪಿಸಿಸಿ ವಕ್ತಾರ ಸತ್ಯಾನಂದ, ಮುಖಂಡರಾದ ವಿನಯ್‌ರಾಮಕೃಷ್ಣ, ತೈಲೂರು ಚಲುವರಾಜು, ಸುರೇಶ್‌ಕಂಠಿ, ನಾಗಭೂಷಣ್, ಕುಮಾರ್. ಸತೀಶ್, ಕೆ.ಆರ್.ಮಹೇಶ್, ಅಜ್ಜಹಳ್ಳಿ ರಾಮಕೃಷ್ಣ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net