ಅಧಿಕಾರ ಸದ್ಬಳಕೆ ಮಾಡಿಕೊಳ್ಳದ ಎಚ್​ಡಿಕೆ : ನಿರುದ್ಯೋಗ ನಿವಾರಿಸಬಹುದಿತ್ತು ಎಂದ ಸಂಸದ ಡಿ.ಕೆ. ಸುರೇಶ್​

4
Published on

 ಕೂಟಗಲ್​ (ರಾಮನಗರ)

ಎಚ್​.ಡಿ. ಕುಮಾರಸ್ವಾಮಿ ಅವರು ತಮಗೆ ದೊರೆತ ಅಧಿಕಾರವನ್ನು ಸರಿಯಾಗಿ ಬಳಕೆ ಮಾಡಿಕೊಂಡಿದ್ದರೆ ನಿರುದ್ಯೋಗ ನಿವಾರಣೆ ಮಾಡಬಹುದಾಗಿತ್ತು ಎಂದು ಸಂಸದ ಡಿ.ಕೆ. ಸುರೇಶ್​ ಹೇಳಿದರು.

ಕೂಟಗಲ್​ ಹೋಬಳಿಯ ತಾಳವಾಡಿ ಗ್ರಾಮದಲ್ಲಿ ಭಾನುವಾರ ಸಂಜೆ ಕಾಂಗ್ರೆಸ್​ ಪಕ್ಷ ಸೇರ್ಪಡೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು, ಜಿಲ್ಲೆಯ ನೀರಾವರಿ ಯೋಜನೆಗೆ ಎಚ್​ಡಿಕೆ ಅವರ ಕೊಡುಗೆ ಏನು?, ಈ ಭಾಗದ ರೆತರಿಗೆ ಜೀವನಾಡಿ ಆಗಬಹುದಾದ ಮಂಚನಬೆಲೆ ಮತ್ತು ವೆ.ಜಿ. ಗುಡ್ಡ ಜಲಾಶಯಗಳು ಪಕ್ಕದಲ್ಲೇ ಇದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದರು.

ಸತ್ತೇಗಾಲ ಯೋಜನೆ ನಮ್ಮದು ಎಂದು ಕುಮಾರಸ್ವಾಮಿ ಹೇಳುತ್ತಾರೆ. ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಡಿಪಿಆರ್​ ಆಗಿ, ಸಂಪುಟದ ಅನುಮತಿ ಪಡೆಯಲಾಗಿದೆ. ಇದಕ್ಕಾಗಿ ನನ್ನ ಹೋರಾಟ ಎಷ್ಟು ಎನ್ನುವುದನ್ನು ಕಡತಗಳು ಹೇಳುತ್ತವೆ. ಸಮ್ಮಿಶ್ರ ಸರ್ಕಾರದಲ್ಲಿ ಎಚ್​ಡಿಕೆ ಬಳಿಗೆ ಸಹಿಗೆ ಹೋದಾಗಲಷ್ಟೇ ಅವರಿಗೆ ಯೋಜನೆ ಅರಿವಿಗೆ ಬಂದಿದ್ದು ಎಂದು ಸುರೇಶ್​ ಟೀಕಿಸಿದರು.

ಎಲ್ಲವನ್ನೂ ಸುಳ್ಳಿನಿಂದಲೇ ಸಾಧಿಸಲು ಸಾಧ್ಯವೇ ಎಂದು ಎಚ್​ಡಿಕೆ ಅವರನ್ನು ಪ್ರಶ್ನಿಸಿದ ಡಿಕೆ ಸುರೇಶ್​, ಹುಚ್ಚಮ್ಮನದೊಡ್ಡಿ ಏತ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಿದವರು ಯಾರು?, ಇದು ಕೊಳಚೆ ನೀರು ಎನ್ನುವುದು ನಿಮಗೆ ತಿಳಿದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬದಲಾವಣೆ ಪರ್ವ: ಜಿಲ್ಲೆಯ ಜನರಿಗೆ ಯಾರು ಏನು ಎಂಬುದು ಗೊತ್ತಿದೆ. ಕಾಂಗ್ರೆಸ್​ಗೆ ಮಾತ್ರ ಎಲ್ಲರನ್ನೂ ಒಟ್ಟಿಗೆ ಅಭಿವೃದ್ಧಿಯತ್ತ ಕೊಂಡೊಯ್ಯುವ ಶಕ್ತಿ ಎನ್ನುವುದು ಮನವರಿಕೆ ಆಗಿದೆ. ಇದಕ್ಕೆ ಧಕ್ಕೆಯಾಗದಂತೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​ ಒಟ್ಟಿಗೆ ಕೆಲಸ ಮಾಡಲಿದ್ದಾರೆ ಎಂದರು. ಈ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಪಕ್ಷಗಳ ಕಾರ್ಯಕರ್ತರು ಮುಖಂಡರು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ ಎಂದು ಸುರೇಶ್​ ಹೇಳಿದರು.

ಮಾಗಡಿ ಮಾಜಿ ಶಾಸಕ ಎಚ್​.ಸಿ. ಬಾಲಕೃಷ್ಣ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷ$ವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸುತ್ತಿದ್ದು, ಜಿಲ್ಲೆಯಲ್ಲಿಯೂ ಪಕ್ಷ ಬಲವರ್ಧನೆ ಆಗಲಿದೆ. ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳವಾಗಿದ್ದು, ಅವರ ನಂಬಿಕೆಗೆ ಚ್ಯುತಿ ಬಾರದಂತೆ ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತೇವೆ. ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಅಗತ್ಯವಿದ್ದು, ಕಾಂಗ್ರೆಸ್​ ಸರ್ಕಾರ ಬಂದರೆ ಮಾಗಡಿ ಸೇರಿ ಜಿಲ್ಲೆಯ ಪ್ರತಿ ಹೋಬಳಿಗೆ ಒಂದರಂತೆ ಕೈಗಾರಿಕಾ ಪ್ರದೇಶ ಸ್ಥಾಪಿಸುವ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಪರವಾಗಿ ಇರುವ ಕಾಂಗ್ರೆಸ್​ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಜಾಲಮಂಗಲ ಭಾಗದ ಹಲವಾರು ಜೆಡಿಎಸ್​ ಕಾಯಕರ್ತರು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾದರು. ಮಾಜಿ ಶಾಸಕ ಕೆ.ರಾಜು, ತಾಪಂ ಮಾಜಿ ಅಧ್ಯಕ್ಷ ಜಗದೀಶ್​, ಕಾಂತರಾಜ್​ಪಟೇಲ್​, ಗಾಣಕಲ್​ ನಟರಾಜ್​, ಮಹದೇವ್​, ಜಾಲಮಂಗಲ ಚಂದ್ರು, ರಾಮಣ್ಣ, ತಾಳವಾಡಿ ಕುಮಾರ್​, ನಂಜುಡಪ್ಪ, ಸಿದ್ದಲಿಂಗಮೂರ್ತಿ, ರಾಮಚಂದ್ರು ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net