ಅಧಿಕಾರ ಸದ್ಬಳಕೆ ಮಾಡಿಕೊಂಡು ಜನರ ಸೇವೆ

24 KRN-1
Published on

ಕೆ.ಆರ್.ನಗರ: ಕ್ಷೇತ್ರದ ಜನತೆ ನನ್ನ ಮೇಲೆ ನಂಬಿಕೆಯಿಟ್ಟು ನೀಡಿರುವ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಅದನ್ನು ಜನರ ಸೇವೆಗೆ ಬಳಕೆ ಮಾಡಿಕೊಳ್ಳುತ್ತೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಹಾಸನ-ಮೈಸೂರು ರಸ್ತೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಬುಧವಾರ ನಡೆದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿದ ಅವರು, ಅಧಿಕಾರಿಗಳು ಜನರನ್ನು ಕಚೇರಿಗಳಿಗೆ ಅಲೆಸುವುದನ್ನು ತಪ್ಪಿಸಲು ಈ ಕಾರ್ಯ ಮಾಡುತ್ತಿರುವುದಾಗಿ ತಿಳಿಸಿದರು.

ಈಗಾಗಲೇ ಕ್ಷೇತ್ರದ ವ್ಯಾಪ್ತಿಯ ನಾಲೆಗಳಿಗೆ ಕಾವೇರಿ ನದಿಯಿಂದ ನೀರು ಹರಿಯಬಿಡಲಾಗಿದ್ದು, ಅದು ರೈತರ ಜಮೀನಿನ ಕಡೆಯ ಭಾಗದವರೆಗೆ ಹರಿದು ಹೋಗುವಂತೆ ನೋಡಿಕೊಳ್ಳಲಾಗುವುದು. ಇದರ ಜತೆಗೆ ಅಗತ್ಯವಿರುವೆಡೆ ನಾಲೆಗಳಲ್ಲಿ ಹೂಳು ತೆಗೆಯಲಾಗಿದೆ. ಅಲ್ಲದೆ ಬಿತ್ತನೆ ಬೀಜ ವಿತರಿಸಲು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮೇ 23ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರ ಸಚಿವರೊಂದಿಗೆ ಪಟ್ಟಣಕ್ಕೆ ಭೇಟಿ ನೀಡಿ ಚಾಲನೆ ನೀಡಲಾಗಿದ್ದ ನೂರಾರು ಕೋಟಿ ರೂ.ಗಳ ಕಾಮಗಾರಿಗಳು ಆರಂಭವಾಗಿದ್ದು, ನಿಗದಿತ ಅವಧಿಯಲ್ಲಿ ಅವುಗಳನ್ನು ಪೂರ್ಣಗೊಳಿಸಲಾಗುವುದು. ಇದರ ಜತೆಗೆ ಕ್ಷೇತ್ರದ ವಿವಿಧ ಗ್ರಾಮಗಳು ಮತ್ತು ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಅಗತ್ಯವಿರುವ ಹಣವನ್ನು ಸರ್ಕಾರದಿಂದ ತಂದು ಕೆಲಸ ಮಾಡಿಸುವುದಾಗಿ ಪ್ರಕಟಿಸಿದ ಶಾಸಕರು, ಸಾರ್ವಜನಿಕರ ಕೆಲಸ ಮಾಡುವಾಗ ನಾನು ಜಾತಿ ಅಥವಾ ಪಕ್ಷ ರಾಜಕಾರಣ ಮಾಡದೆ ಪ್ರಾಮಾಣಿಕವಾಗಿ ಜನಸೇವೆ ಮಾಡುತ್ತೇನೆ ಎಂದರು.

ಕ್ಷೇತ್ರದ ವಿವಿಧ ಭಾಗಗಳಿಂದ ಬಂದಿದ್ದ ನೂರಾರು ಜನರ ಅಹವಾಲು ಆಲಿಸಿದ ಶಾಸಕರು, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರಲ್ಲದೆ ಮತ್ತಷ್ಟು ಜನರ ಸಂಕಷ್ಟಗಳಿಗೆ ಸೂಕ್ತವಾಗಿ ಸ್ಪಂದಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

ಶಾಸಕ ಡಿ.ರವಿಶಂಕರ್ ಅವರು ಫಾತಿಮಾ ಮತ್ತು ಸೈಯದ್ ಇರ್ಷಾದ್ ಅವರಿಗೆ ವೈಯಕ್ತಿಕವಾಗಿ 1.30 ಲಕ್ಷ ಬೆಲೆಯ ಶ್ರವಣ ಸಾಧನಗಳನ್ನು ನೀಡಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷರಾದ ಉದಯಶಂಕರ್, ಎಂ.ಎಸ್.ಮಹದೇವ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ನಿರ್ದೇಶಕರಾದ ಸೈಯದ್‌ಜಾಬೀರ್, ಕೆ.ಎನ್.ಪ್ರಸನ್ನಕುಮಾರ್, ಸರಿತಾ ಜವರಪ್ಪ, ಪುರಸಭೆ ಸದಸ್ಯರಾದ ಕೋಳಿಪ್ರಕಾಶ್, ನಟರಾಜು, ಮುಖಂಡರಾದ ಡಿ.ಸಿ.ರವಿ, ಮಧುವನಹಳ್ಳಿ ಆದರ್ಶ, ಅನಂತ್, ಡಾ.ದಾಸ್‌ಪ್ರಕಾಶ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net