

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಒಂದೇ ದಿನ 55 ಲಕ್ಷ ಫಲಾನುಭವಿಗಳಿಗೆ ಕಂದಾಯ ಇಲಾಖೆಗೆ ಸಂಬಂಧಿಸಿದ 5 ಕೋಟಿ ದಾಖಲೆಗಳನ್ನು ಒದಗಿಸುವ ಕಂದಾಯ ದಾಖಲೆ, ಮನೆ ಬಾಗಿಲಿಗೆ ವಿನೂತನ ಯೋಜನೆಗೆ ಚಿಕ್ಕಬಳ್ಳಾಪುರದಲ್ಲಿ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಖುದ್ದು ಮುಖ್ಯಮಂತ್ರಿಗಳೇ ತಾಲೂಕಿನ ಗುಂಗಿರ‌್ಲಹಳ್ಳಿ ಗ್ರಾಮದ ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ದಾಖಲೆಗಳನ್ನು ವಿತರಿಸಿದರಲ್ಲದೆ ಕೆಲ ಸಮಯ ಊರಿನ ಅರಳಿಕಟ್ಟೆಯ ಮೇಲೆ ಸಚಿವರು ಮತ್ತು ಅಧಿಕಾರಿಗಳ ಜತೆಯಲ್ಲಿ ಕುಳಿತು ಜನರ ಸಮಸ್ಯೆಗಳನ್ನು ಆಲಿಸಿದರು.
ಇದೇ ವೇಳೆ ಜನರ ಎದುರು ಸಾಧನೆಗಳನ್ನು ಹೇಳಿಕೊಳ್ಳುವುದರ ನಡುವೆ ಹಿಂದಿನ ಸರ್ಕಾರಗಳ ಆಡಳಿತ ವೈಖರಿಯನ್ನು ಟೀಕಿಸಿದರು.
ಬಿಜೆಪಿ ಸರ್ಕಾರವು ನಿರ್ದಾಕ್ಷಿಣ್ಯವಾಗಿ ಭೂಮಿ ಮತ್ತು ರೌಡಿ ಮಾಫಿಯಾ ಬಗ್ಗು ಬಡಿಯುತ್ತಿದೆ. ಆದರೆ, ಅವರ ಸರ್ಕಾರಗಳು ಹಿಂದೆ ಗಣಿ, ಕಂದಾಯ, ಗುತ್ತಿಗೆ, ಶಿಕ್ಷಣ ಸೇರಿ ಹಲವು ಮುಲಾಜಿನಲ್ಲಿದ್ದವು. ಭಾಷಣದಲ್ಲಿ ಮಾತ್ರ ಜನಪರ ನಿಲುವುಗಳನ್ನು ವ್ಯಕ್ತಪಡಿಸುತ್ತಿದ್ದವು ಎಂದು ಕಿಡಿಕಾರಿದರು.
ಗರೀಬಿ ಹಠಾವೋ ಎಂದು ಹೇಳುತ್ತ ಹಲವು ವರ್ಷ ಅಧಿಕಾರ ಅನುಭವಿಸಿದ್ದೀರಿ. ಆದರೆ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಬಡತನ ಪೂರ್ಣ ಪ್ರಮಾಣದಲ್ಲಿ ಹೋಗಿಲ್ಲ. ಎಷ್ಟು ವರ್ಷ ವೋಟ್ ಬ್ಯಾಂಕಿಗಾಗಿ ಬಡವರ ಕಲ್ಯಾಣದ ಬಗ್ಗೆ ಹೇಳುತ್ತೀರಿ? ಎಂದು ಕಾಂಗ್ರೆಸ್ ಅನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.ರಾಜಕೀಯದಲ್ಲಿ ಅಧಿಕಾರ ಮತ್ತು ಜನಸೇವೆ ರಾಜಕಾರಣ ಎರಡನ್ನು ನೋಡಬಹುದು. ಈ ಪೈಕಿ ಹಿಂದೆ ಬಹುತೇಕ ಮೊದಲನೇಯದರ ಪ್ರದರ್ಶನ ಕಾಣಲಾಗಿದೆ. ಇದು ಜನರ ಬೇಸರಕ್ಕೆ ಕಾರಣವಾಗಿದೆ. ಇದರ ನಡುವೆ ಈಗಲೂ ವಿಪಕ್ಷದಿಂದ ಅಧಿಕಾರಕ್ಕೆ ಬರುವ ದರ್ಪದ ಘೋಷಣೆಯೇ ಕೇಳಿ ಬರುತ್ತಿದೆ. ಆದರೆ, ಬಿಜೆಪಿ ಸರ್ಕಾರ ಬಡ ಮತ್ತು ದೀನ ದಲಿತರ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಮನೆ ಬಾಗಿಲಿಗೆ ಹೋಗುತ್ತಿದೆ. ಈ ಎರಡರ ವ್ಯತ್ಯಾಸವನ್ನು ಜನ ಅರಿಯಬೇಕು ಎಂದರು.
ರಾಜ್ಯದಲ್ಲಿ ಕಾಡಿದ ಕರೊನಾ, ನೆರೆ ಹಾವಳಿ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ದುಡ್ಡು ಎಲ್ಲಿದೆ ಎಂಬುದಾಗಿ ಭಾವಿಸಿದ್ದವರಿಗೆ ಸರಿಯಾಗಿ ಉತ್ತರ ನೀಡಲಾಗಿದೆ. ನೆರೆಗೆ ನಷ್ಟ ಅನುಭವಿಸಿದ ರೈತರಿಗೆ ಡಬಲ್ ಪರಿಹಾರವನ್ನು ಒಂದೇ ತಿಂಗಳಿನಲ್ಲಿ ನೀಡಲಾಯಿತು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ರೈತರ ಮಕ್ಕಳಿಗಾಗಿ ವಿದ್ಯಾನಿಧಿ ಯೋಜನೆ, ರೈತಶಕ್ತಿ ಯೋಜನೆ, ಯಶಸ್ವಿನಿ ಮರುಜಾರಿ, ಬಡ್ಡಿರಹಿತ ಕೃಷಿ ಸಾಲ, ಫಲಾನುಭವಿಗಳ ಮಾಸಾಶನ ಹೆಚ್ಚಳ ಸೇರಿ ಹಲವು ನಿರ್ಧಾರಗಳನ್ನು ಘೋಷಿಸಲಾಯಿತು. ಬಜೆಟ್‌ನಲ್ಲೂ ಎಲ್ಲ ವಲಯಗಳಿಗೂ ಆದ್ಯತೆ ನೀಡುವ ಮೂಲಕ ಜನಪರ ಸರ್ಕಾರ ಎಂಬುದನ್ನು ನಿರೂಪಿಸಲಾಯಿತು ಎಂದು ಸಮರ್ಥಿಸಿಕೊಂಡರು.
ಕಂದಾಯ ಸಚಿವ ಆರ್.ಅಶೋಕ ಮಾತನಾಡಿ, ಕಂದಾಯ ಇಲಾಖೆಯನ್ನು ಜನಸ್ನೇಹಿ ಇಲಾಖೆಯನ್ನಾಗಿಸುವ ಗುರಿಯೊಂದಿಗೆ ಹಲವು ಮಹತ್ತರ ಬದಲಾವಣೆ ತರಲಾಗುತ್ತಿದೆ. ತ್ವರಿತವಾಗಿ ಭೂ ಪರಿವರ್ತನೆ, ಜನರಿಗೆ ಸಾಗುವಳಿ ಚೀಟಿ ವಿತರಣೆ, ಮನೆ ಬಾಗಿಲಿಗೆ ಪಿಂಚಣಿ, ಜಿಲ್ಲಾಡಳಿತ ನಡೆ, ಹಳ್ಳಿಗಳ ಕಡೆಗೆ ಸೇರಿ ವಿನೂತನ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಪ್ರತಿ ತಿಂಗಳು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುತ್ತಿದೆ. ಅಲ್ಲಿ ಸುಮ್ಮನೆ ಮಲಗಿ ಬರದೆ ಶಾಲೆ, ಸ್ಮಶಾನ, ಮಾಸಾಶನ, ಕಂದಾಯ ಸೇರಿ ಹಲವು ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ ಎಂದರು. ಸಚಿವ ಎಂಟಿಬಿ ನಾಗರಾಜ್, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ರಾಜ್ಯ ಮಾವು ಮತ್ತು ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗರಾಜ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಪ್ರಾದೇಶಿಕ ಆಯುಕ್ತ ನವೀನ್‌ರಾಜ್ ಸಿಂಗ್, ಡಿಸಿ ಆರ್.ಲತಾ, ಜಿಪಂ.ಸಿಇಒ ಪಿ. ಶಿವಶಂಕರ್ ಇತರರು ಇದ್ದರು.
ಹಿಂದೆ ಕಂದಾಯ ಇಲಾಖೆಯ ದಾಖಲೆಯನ್ನು ಪಡೆಯಲು ಕಾಲಿನಲ್ಲಿನ ಚಪ್ಪಲಿ ಸವೆಯುವಂತೆ ಕಚೇರಿಗೆ ಹಲವು ಬಾರಿ ಅಲೆದಾಡಬೇಕಾಗಿತ್ತು. ಇದನ್ನು ತಪ್ಪಿಸುವಲ್ಲಿ ನೂತನ ಯೋಜನೆಯು ಸಹಕಾರಿಯಾಗಿದೆ. ಬರೋಬ್ಬರಿ 55 ಲಕ್ಷ ಮಂದಿಗೆ 5 ಕೋಟಿ ದಾಖಲೆ ಒದಗಿಸುತ್ತಿರುವುದು ದೊಡ್ಡ ಸಾಧನೆಯಾಗಿದೆ. ಡಾ ಕೆ.ಸುಧಾಕರ್ ಆರೋಗ್ಯ ಸಚಿವ
ಕಂದಾಯ ಕ್ರಾಂತಿ: ತಾಲೂಕಿನ ಗುಂಗ್ಲಿರಹಳ್ಳಿಯಲ್ಲಿ ಚಾಲನೆ ಪಡೆದುಕೊಂಡಿರುವ ನೂತನ ಯೋಜನೆಯು ಕಂದಾಯ ಇಲಾಖೆಯಲ್ಲಿ ದೊಡ್ಡ ಕ್ರಾಂತಿಯನ್ನುಂಟು ಮಾಡಿದೆ. ಇದರ ಮೂಲಕ ಸರ್ಕಾರವೇ ಜನರ ಮನೆ ಬಾಗಿಲಿಗೆ ಹೋಗುತ್ತಿದೆ. ಶ್ರಮ ಮತ್ತು ಬೆವರಿಗೆ ಬೆಲೆ ಸಿಗಬೇಕೆಂಬುದು ನಮ್ಮ ಸಂಕಲ್ಪ. ಇದು ಬಡವರ ಪರ ಕಾಳಜಿ ಇದ್ದವರಿಗೆ ಮಾತ್ರ ಗೊತ್ತಾಗುತ್ತದೆ. ಖ್ಯಾತ ಸಾಹಿತಿ ರವೀಂದ್ರನಾಥ್ ಠಾಗೋರ್ ದೇವರು ಎಲ್ಲಿದ್ದಾನೆ ಎಂಬ ಪ್ರಶ್ನೆಗೆ ಕಾರ್ಮಿಕರ ಶ್ರಮ ಮತ್ತು ರೈತರ ಬೆವರಿನಲ್ಲಿದ್ದಾನೆ ಎಂಬುದಾಗಿ ಹೇಳಿದ್ದಾರೆ. ಇದೇ ನಮ್ಮ ಧ್ಯೇಯ ಎಂದು ಸಿಎಂ ತಿಳಿಸಿದರು.
ದಾಖಲೆ ಹಂಚಿಕೆ: ಕಂದಾಯ ದಾಖಲೆ, ಮನೆ ಬಾಗಿಲಿಗೆ ಯೋಜನೆಯಡಿ ಪಹಣಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಹಾಗೂ ಇತರೆ ದಾಖಲೆಗಳನ್ನು ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಗಿದೆ. ಇದಕ್ಕೆ ಈಗಾಗಲೇ ಹಂಚಿಕೆಯ ನಿರೀಕ್ಷೆಯ 4,72,371 ರ ಪಹಣಿಗಳು, 78,976 ಅಟ್ಲಾಸ್ ಪ್ರತಿಗಳು, 2,07,892 ಜಾತಿ, ಆದಾಯ ಪ್ರಮಾಣ ಪತ್ರಗಳು ಹಾಗೂ ಇತರ ದಾಖಲೆಗಳ ಹಂಚಿಕೆಗೆ ಕ್ರಮ ಕೈಗೊಳ್ಳಲಾಗಿದೆ.
ಬಸವಪ್ಪ ಬಸಪ್ಪ ಆದ್ರೆ: ಕಂದಾಯ ಇಲಾಖೆಯ ಅಧಿಕಾರಿಗಳ ಕೆಲಸವನ್ನು ಬ್ರಹ್ಮದೇವನ ಕೆಲಸಕ್ಕೆ ಹೋಲಿಸಿದ ಮುಖ್ಯಮಂತ್ರಿ, ಸಂಭವಿಸುವ ಎಡವಟ್ಟುಗಳ ಬಗ್ಗೆ ಹೇಳಿದರು. ಬ್ರಹ್ಮದೇವ ಬರೆದಂತೆ ಅಧಿಕಾರಿಗಳ ಕೆಲಸ. ದಾಖಲೆಯಲ್ಲಿ ಬಸವಪ್ಪ ಎಂಬುದನ್ನು ಬಸಪ್ಪ ಅಂತಾ ಬರೆದರೆ ಸಾಕು, ಸಂಬಂಧಪಟ್ಟ ಅರ್ಜಿದಾರ ಬದಲಾವಣೆಗೆ
ಕಷ್ಟಪಡದೆ ಬೇರೆ ವಿಧಿ ಇರಲಿಲ್ಲ. ಸಿಬ್ಬಂದಿ ಸ್ವಯಂ ತಪ್ಪುಗಳನ್ನು ಸರಿಪಡಿಸಲು ಹೋಗುವುದಿಲ್ಲ. ಇನ್ನು ಸಮಸ್ಯೆ ಪರಿಹಾರಕ್ಕೆ ಕಚೇರಿಗೆ ಅಲೆದು ಸುಸ್ತಾಗಬೇಕು. ಹಿಂದೆ ಸಣ್ಣ ದಾಖಲೆಗಳಿಗೆ ಓಡಾಟವು ಅಷ್ಟಿಷ್ಟು ಇರುತ್ತಿರಲಿಲ್ಲ. ಸರಿಯಾದ ಸಮಯಕ್ಕೆ ಸರಿಯಾಗಿ ಸಿಗುತ್ತಿರಲಿಲ್ಲ. ಈಗ ಬದಲಾವಣೆಯ ಕ್ರಾಂತಿಯಾಗಿದೆ. ಸರ್ಕಾರವೇ ದಾಖಲೆಗಳನ್ನು ದೃಢಪಡಿಸಿ, ಮನೆಗಳಿಗೆ ತಲುಪಿಸುತ್ತಿದೆ ಎಂದರು.
ಗಂಗಿರ‌್ಲಹಳ್ಳಿ ಅಲ್ಲವಾ? ಊರಿನ ಹೆಸರನ್ನು ಗುಂಗಿರ‌್ಲಹಳ್ಳಿ ಬದಲಿಗೆ ಗಂಗಿರ‌್ಲಹಳ್ಳಿ ಎಂದು ತಪ್ಪಾಗಿ ಹಲವು ಬಾರಿ ಹೇಳಿ, ಸರಿಯೇ ಎಂದು ಪ್ರಶ್ನಿಸುವ ಮೂಲಕ ಸಚಿವ ಆರ್.ಅಶೋಕ್ ಜನರನ್ನು ನಗೆಗಡಲಿನಲ್ಲಿ ತೇಲಿಸಿದರು. ಗಂಗಿರ‌್ಲಹಳ್ಳಿಯ ಗ್ರಾಮೀಣ ಸೊಗಡು, ಜನರ ಪ್ರೀತಿ ಮರೆಯಲಾಗದು ಎಂದು ಹೇಳುತ್ತಿದ್ದಂತೆ ಸಭಿಕರು ಊರಿನ ಹೆಸರು ಹೇಳಿಕೊಡಲು ಯತ್ನಿಸಿದರು. ಇದೇ ರೀತಿ ಹಲವು ಪ್ರಯತ್ನಗಳ ನಂತರ ಸಚಿವರು ಸರಿಯಾಗಿ ಉಚ್ಚರಿಸಿದರು. ಕೊನೆಗೆ ಜನ ಚಪ್ಪಾಳೆ ಹೊಡೆದಾಗ, ಖುಷಿಪಡಿಸುವ ಸಲುವಾಗಿ ತಪ್ಪಾಗಿ ಹೇಳಬೇಕಾಯಿತು ಎನ್ನುವ ಮೂಲಕ ಎಲ್ಲರನ್ನು ನಗುವಂತೆ ಮಾಡಿದರು.
ಹಿತ ಕಾಪಾಡುವ ಜನತಾ ಸರ್ಕಾರ ನಮ್ಮದು: ಬಡ ಮತ್ತು ಮಧ್ಯಮ ವರ್ಗದವರ ಹಿತ ಕಾಪಾಡುವ ಮೂಲಕ ಜನತಾ ಸರ್ಕಾರ ಎಂಬ ಹೆಸರು ಗಳಿಸಲಾಗಿದೆ. ರೈತ, ಕಾರ್ಮಿಕ, ಮಹಿಳೆ, ಶೋಷಿತರ ಪರವಾಗಿ ಕೆಲಸ ಮಾಡುತ್ತಿದೆ. ಇದಕ್ಕೆ 20 ಸಾವಿರ ಕೋಟಿ ವ್ಯವಹಾರ ನಡೆಸುವ ಹೈನುಗಾರಿಕೆಯ ರೈತರ ಅನುಕೂಲಕ್ಕಾಗಿ 100 ಕೋಟಿ ರೂ. ಅನುದಾನ ಮಂಜೂರಾತಿಯೊಂದಿಗೆ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪಿಸಲಾಗಿದೆ. ರೇಷ್ಮೆಗೂಡು ದ್ವಿತಳಿಗೆ ಪ್ರೋತ್ಸಾಹಧನ, ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ಅಭಿವೃದ್ಧಿ ಸೇರಿ ಹಲವು ಘೋಷಣೆಗಳನ್ನು ಮಾಡಲಾಗಿದೆ ಎಂದು ಸಿಎಂ ಆಡಳಿತ ವೈಖರಿಯನ್ನು ಸಮರ್ಥಿಸಿಕೊಂಡರು.
ಎತ್ತಿನಗಾಡಿಯಲ್ಲಿ ಬಂದ್ರು: ಗ್ರಾಮದ ಪ್ರತಿ ಮನೆಗಳಲ್ಲೂ ಹೂವಿನ ಅಲಂಕಾರ ಪ್ರದರ್ಶನ, ತಳಿರು ತೋರಣಗಳು ಸಿಂಗಾರ ಕಂಡುಬಂತು. ಇದೇ ವೇಳೆ ಸಿಎಂ ಸೇರಿ ಗಣ್ಯರನ್ನು ಎತ್ತಿನಗಾಡಿಯಲ್ಲಿ ಕರೆತರಲಾಯಿತು. ಸಾಂಕೇತಿಕವಾಗಿ ಐದಾರು ಮನೆಗಳಿಗೆ ಬೊಮ್ಮಾಯಿ ತೆರಳಿ ದಾಖಲೆ ಪತ್ರ ವಿತರಿಸಿದರು. ಗ್ರಾಮದ ಅರಳಿಕಟ್ಟೆ ಮೇಲೆ ಸಂವಾದ ನಡೆಸಿ ಜನರ ಕುಂದುಕೊರತೆ ಆಲಿಸಿದರು. ಜಕ್ಕಲಮಡಗು ಜಲಾಶಯ ನೀರಿಗೆ ರಸ್ತೆ ಮುಳುಗಡೆ, ರಸ್ತೆ ಸಂಚಾರ ಸಮಸ್ಯೆ, ಸೇತುವೆ ನಿರ್ಮಾಣ, ವಸತಿ ಸೌಲಭ್ಯ ಸೇರಿ ಹಲವು ಸಮಸ್ಯೆಗಳನ್ನು
ನಾಡಿನ ದೊರೆಯ ಎದುರು ಜನರು ಹೇಳಿಕೊಂಡರು. ಇನ್ನು ಕಾರ್ಯಕ್ರಮದ ವೇದಿಕೆಯಲ್ಲಿ ರಾಗಿ ಕಣ, ಕೃಷಿ ಉತ್ಪನ್ನಗಳು ಮತ್ತು ಹಣ್ಣುಗಳ ಪ್ರದರ್ಶನದ ಮೂಲಕ ಸ್ಥಳೀಯ ಗ್ರಾಮೀಣ ಸೊಗಡನ್ನು ಸಿಎಂಗೆ ಪರಿಚಯಿಸಲಾಯಿತು.
ಕಾಫಿ ಸವಿದ ಸಿಎಂ: ಗ್ರಾಮದಲ್ಲಿ ಸಂಚಾರದ ನಡುವೆ ಇಲ್ಲಿನ ನಿವಾಸಿ ದಲಿತ ಮಹಿಳೆ ರತ್ನಮ್ಮ ತಂದು ಕೊಟ್ಟ ಕಾಫಿಯನ್ನು ಸಿಎಂ ಸವಿದರು. ಊರಿಗೆ ಬರುವ ವಿಚಾರ ತಿಳಿದು ಪ್ರೀತಿಯಿಂದ ಕೈಯ್ಯರೆ ಮಾಡಿಕೊಂಡು ಬಂದಿದ್ದೇನೆ, ಇದನ್ನು ಕುಡಿದು ಹೇಗಿದೆ ಎಂಬುದನ್ನು ಹೇಳಬೇಕೆಂದು ಕಾಫಿ ಕೊಟ್ಟರು. ಕಾಫಿ ಸವಿದ ಸಿಎಂ, ಪ್ರೀತಿಯ ಅಕ್ಕರೆ ಸಕ್ಕರೆಯ ಸವಿ ಹೆಚ್ಚಾಗಿದೆ ಎಂಬ ಒಲವಿನ ಮಾತು ಹೇಳಿ ಖುಷಿಪಡಿಸಿದರು.