

ಹೊಳಲ್ಕೆರೆ: ಅಧಿಕಾರ ಇರುವರೆಗೂ ಜನಸೇವೆಯಲ್ಲಿರುವುದಾಗಿ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು. ತಾಲೂಕಿನ ಮುತ್ತುಗದೂರಲ್ಲಿ 4.10 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಮತ್ತು ಬಸ್‌ನಿಲ್ದಾಣ ಕಾಮಗಾರಿಗಳಿಗೆ ಶನಿವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿ,ಭರಮಸಾಗರ ವಿಧಾನಸಭಾ ಕ್ಷೇತ್ರದಿಂದ ಪ್ರಥಮ ಬಾರಿಗೆ ಗೆದ್ದಾಗ 385 ಹಳ್ಳಿಗಳಿಗೆ ರಸ್ತೆ ಮಾಡಿಸಿದೆ. 2ನೇ ಚುನಾವಣೆಯಲ್ಲಿ ಯುವಕರು ನನ್ನನ್ನು ಹೆಗಲ ಹೊತ್ತು ಮೆರವಣಿಗೆ ಮಾಡಿ ಗೆಲ್ಲಿಸಿದರು. ಹೊಳಲ್ಕೆರೆ ತಾಲೂಕಿನಾದ್ಯಂತ ಚೆಕ್‌ಡ್ಯಾಂ,ಸಿಸಿರಸ್ತೆ, ಕೆರೆಕಟ್ಟೆಗಳು,ಶಾಲಾ-ಕಾಲೇಜುಗಳನ್ನು ಕಟ್ಟಿಸಿದ್ದೇನೆ. ನನ್ನ ಮನವಿಗಳಿಗೆ ಐಎಎಸ್ ಅಧಿಕಾರಿ ಗಳು ಸ್ಪಂದಿಸಿ ಕೆಲಸ ಮಾಡುತ್ತಾರೆ. ಕ್ಷೇತ್ರದಲ್ಲಿ ನಿತ್ಯ ಒಂದಲ್ಲ ಒಂದು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಸಾರ್ವಜನಿಕರ ಕಷ್ಟ-ಸುಖದಲ್ಲಿ ಭಾಗಿಯಾಗುತ್ತಿದ್ದೇನೆ.
ವಿದ್ಯುತ್ ಸಮಸ್ಯೆಯಾಗಬಾರದೆಂದು 17ವಿದ್ಯುತ್ ಪವರ್‌ಸ್ಟೇಷನ್‌ಗಳು ನಿರ್ಮಾಣವಾಗಿವೆ. ಚಿಕ್ಕಜಾಜೂರಿನ ಕೋಟೆಹಾಳ್ ಬಳಿ 500 ಕೋಟಿ ರೂ.ವೆಚ್ಚದಲ್ಲಿ ಪವರ್ ಸ್ಟೇಷನ್ ನಿರ್ಮಾಣವಾಗುತ್ತಿದೆ. ಇದರಿಂದ ಇನ್ನು 50-60 ವರ್ಷ ಕೃಷಿಗೆ ವಿದ್ಯುತ್ ತೊಂದರೆ ಕಾಡದು. 367 ಕೋಟಿ ರೂ. ಅನುದಾನದಲ್ಲಿ ವಾಣಿವಿಲಾಸಸಾಗರದಿಂದ ಕ್ಷೇತ್ರ ವ್ಯಾಪ್ತಿಯ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು. 186 ಹೊಸ ಶಾಲೆಗಳನ್ನು ಕಟ್ಟಿಸಿದ್ದೇನೆ ಎಂದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ಕೆ.ರುದ್ರಣ್ಣ,ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಎಂ.ಬಿ.ಸಿದ್ದೇಶ್,ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ,ಸದಸ್ಯರಾದ ನಟರಾಜ್, ಪ್ರಭು, ಮಂಜುನಾಥ, ಶಿವಕುಮಾರ್, ಗ್ರಾಮದ ಪ್ರಮುಖರು ಇದ್ದರು.