

ಬಾಗಲಕೋಟೆ: ಅಧಿಕ ಮಾಸದಲ್ಲಿ ಮಾಡಿದ ದಾನ-ಧರ್ಮ, ಧಾರ್ಮಿಕ ಕಾರ್ಯಗಳಿಂದ ಹಲವು ಪಟ್ಟು ಪುಣ್ಯ ಪ್ರಾಪ್ತಿ ಆಗುತ್ತದೆ ಎನ್ನುವ ನಂಬಿಕೆ ಇದ್ದು, ಅದರಂತೆ ಬಾಗಲಕೋಟೆ ನಗರದಲ್ಲಿ ಗುರುವಾರ ನಾರಿಯರು ಸೇರಿಕೊಂಡು ಶ್ರೀ ಕೃಷ್ಣ ಪರಮಾತ್ಮನ ಮೂರ್ತಿಗೆ ವಿಶೇಷ ಪೂಜೆ ಹಾಗೂ ತುಲಾಭಾರ ಕಾರ್ಯಕ್ರಮ ನಡೆಸಿದರು.
ಬಾಗಲಕೋಟೆ ನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಸಮಾಜದ ವಾಸವಿ ಯುವತಿ ಮಂಡಳಿ ವತಿಯಿಂದ ಮೊದಲ ಬಾರಿಗೆ ಅಧಿಕ ಮಾಸದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
33 ತಿಂಗಳಿಗೊಮ್ಮೆ ಬರುವ ಅಧಿಕ ಮಾಸವನ್ನು ಪುರುಷೋತ್ತಮ ಮಾಸವೆಂದು ಕರೆಯಲಾಗುತ್ತದೆ. ವಿಷ್ಣುವಿನ ಆರಾಧನೆ ಮಾಡಿದರೆ ಭಗವಂತನ ಕೃಪೆಗೆ ಪಾತ್ರರಾಗುತ್ತಾರೆ ಎನ್ನುವ ನಂಬಿಕೆ ಭಕ್ತರಲ್ಲಿ ಇದೆ. ಹೀಗಾಗಿ 33 ವಸ್ತುಗಳಿಂದ ಕೃಷ್ಣನ ಮೂರ್ತಿಗೆ ತುಲಾಭಾರ ಮಾಡಿದರು.
ಬಾಗಲಕೋಟೆ ನಗರ ಮಾತ್ರವಲ್ಲದೆ, ಬೇರೆ ಬೇರೆ ಊರುಗಳಿಂದ ಆಗಮಿಸಿದ್ದ ಒಟ್ಟು 120 ನಾರಿಯರು ಏಕಕಾಲದಲ್ಲಿ ಪ್ರತ್ಯೇಕವಾಗಿ ತಕ್ಕಡಿಗಳನ್ನು ಇಟ್ಟುಕೊಂಡು ಶ್ರದ್ಧಾಭಕ್ತಿಯಿಂದ ತುಲಾಭಾರದಲ್ಲಿ ಪಾಲ್ಗೊಂಡಿದ್ದರು. ಬಿಂದು ಮಾಧವಚಾರ್ಯರು ಅಧಿಕ ಮಾಸದ ಮಹತ್ವದ ಬಗ್ಗೆ ಮಾಹಿತಿ ನೀಡುತ್ತಲೇ ಕೃಷ್ಣನ ಮೂರ್ತಿಗೆ ತುಲಾಭಾರ ಮಾಡುವ ವಿಧಾನಗಳನ್ನು ಹೇಳಿಕೊಡುತ್ತಿದ್ದರು.
ಅಧಿಕ ಮಾಸದ ವೇಳೆ ಅಧಿಕ ಪುಣ್ಯಪ್ರಾಪ್ತಿ ಆಗುವ ಈ ಕೃಷ್ಣ ತುಲಾಭಾರಕ್ಕೆ ವಿಶೇಷ ಮಹತ್ವ ಇದೆ. ಹಾಗೆಯೇ 33 ವಸ್ತುಗಳಿಂದ ತುಲಾಭಾರ ಮಾಡಬೇಕು. ಪ್ರತಿ ಮಹಿಳೆಯರು ತಾವು ತಂದಿರುವ ತಕ್ಕಡಿಗಳಲ್ಲಿ ಹತ್ತು ಗ್ರಾಮದ ಪಂಚಲೋಹ, ಬೆಳ್ಳಿಯ ಕೃಷ್ಣನ ಮೂರ್ತಿಗೆ ಪೂಜೆ ಹಾಗೂ ತುಲಾಭಾರ ಮಾಡಿದ್ದಾರೆ. ದವಸ ಧಾನ್ಯಗಳು, ಡ್ರೈಫ್ರೂಟ್ಸ್, ಹಣ್ಣು, ಹೂವು, ಮುತ್ತು, ಹವಳ, ಪಚ್ಚೆ ಹೀಗೆ 33 ವಸ್ತುಗಳಿಂದ ಈ ಕಾರ್ಯ ನಡೆದಿದೆ. ಪ್ರತಿಯೊಂದು ವಸ್ತುವಿನ ತುಲಾಭಾರದ ಬಳಿಕ ಮಂಗಳಾರತಿ ನಡೆಯಿತು. ಸತತ 3 ಗಂಟೆಗೂ ಹೆಚ್ಚು ಕಾಲ ಈ ವಿಶೇಷ ಅಧಿಕ ಮಾಸದ ಕಾರ್ಯಕ್ರಮ ನಡೆಯಿತು.
ಮೊದಲ ಬಾರಿಗೆ ನಮ್ಮ ಯುವತಿ ಮಂಡಳಿಯಿಂದ ಏರ್ಪಡಿಸಿದ್ದ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ಪಡೆದುಕೊಂಡು ಅನೇಕ ಮಹಿಳೆಯರು ಭಾಗವಹಿಸಿದ್ದಾರೆ. ಒಟ್ಟು 120 ಮಹಿಳೆಯರು ಪೂಜೆಯಲ್ಲಿ ಪಾಲ್ಗೊಂಡಿದ್ದು ಬಹಳ ಸಂತೋಷ ತಂದಿದೆ ಎಂದು ವಾಸವಿ ಯುವತಿ ಮಂಡಳಿ ಅಧ್ಯಕ್ಷೆ ಶಿಲ್ಪಾ ಹಂದ್ರಾಳ ತಿಳಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಪೂಜಾ ಕೈಂಕರ್ಯದ ಜತೆಗೆ ಕೃಷ್ಣ, ರಾಧೆ ವೇಷಭೂಷಣಧಾರಿಗಳ ಜತೆಗೆ ಮಹಿಳೆಯರು ಹೆಜ್ಜೆ ಹಾಕಿ ಕೋಲಾಟ ಆಡಿ ಸಂಭ್ರಮಿಸಿದರು. ವಾಸವಿ ಯುವತಿ ಮಂಡಳಿಯ ಜ್ಯೋತಿ ಕವತಾಳ, ಪ್ರಿಯಾ ರಾಯಚೂರ, ಸೀಮಾ ಕಂದಕೂರ ಸೇರಿ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.