ಅಧಿಕ ಮಳೆಗೆ ಮುಂಜಾಗ್ರತೆ ವಹಿಸಿ

Cm V-Conference
Published on

ಚಿತ್ರದುರ್ಗ: ಹವಾಮಾನ ಇಲಾಖೆಯೂ ಈ ಬಾರಿ ಮುಂಗಾರಿನಲ್ಲಿ ಅಧಿಕ ಮಳೆ ಸುರಿಯಲಿದೆ ಎಂಬ ಮಾಹಿತಿ ನೀಡಿದ್ದು, ಅದಕ್ಕೆ ಅನುಗುಣವಾಗಿ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಗುರುವಾರ ನಡೆದ ರಾಜ್ಯಮಟ್ಟದ ವಿಡಿಯೋ ಸಂವಾದದಲ್ಲಿ ಮಾತನಾಡಿದರು.

ಮಳೆ ನೀರು ಶುದ್ಧವಾದರೂ ನದಿ, ಕೆರೆಗೆ ಸೇರಿದಾಗ ಹೊಂಡಾಗುವ ಸಾಧ್ಯತೆ ಇದೆ. ಆದ್ದರಿಂದ ಶುಚಿಗೊಳಿಸಿ, ನಗರ ಹಾಗೂ ಗ್ರಾಮೀಣ ಭಾಗಗಳಿಗೆ ಶುದ್ಧ ನೀರನ್ನೇ ಪೂರೈಸಬೇಕು. ಮೇವು ಕೊರತೆ ಉಂಟಾಗದಂತೆ ಎಚ್ಚರವಹಿಸಿ ಎಂದು ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಖಾತೆಯಲ್ಲಿನ ಅನುದಾನ ತುರ್ತು ಕಾರ್ಯಗಳಾದ ನೀರು ಪೂರೈಕೆ, ಬರ ನಿರ್ವಹಣೆ, ಮೇವು ಸರಬರಾಜು ಸೇರಿ ಇನ್ನಿತರೆ ಕಾರ್ಯಗಳಿಗೆ ಬಳಸಿಕೊಳ್ಳಿ ಎಂದು ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಸಲಹೆ-ಸಹಕಾರ ಪಡೆದು ಮಳೆಯ ಅನಾಹುತ ಸಂಭವಿಸುವ ಮುನ್ನ ಅದರ ನಿಯಂತ್ರಣ ಹಾಗೂ ಪರಿಹಾರ ಕ್ರಮಗಳನ್ನು ಅನುಸರಿಸಿ. ನಿರ್ಲಕ್ಷ್ಯ ತೋರುವ ಅಧಿಕಾರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಡಿಸಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಪೂರ್ವ ವಾಡಿಕೆ ಮಳೆಯಾಗಿದೆ. ಆದರೂ ಸಮಸ್ಯಾತ್ಮಕ 75 ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ಮುಂದುವರಿದಲ್ಲಿ ಹಂತ-ಹಂತವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಸ್ಥಗಿತಗೊಳಿಸಲಾಗುವುದು ಎಂದರು.

ಜಿಲ್ಲೆಯ 10 ಗೋಶಾಲೆಗಳಿಗೆ ಜಾನುವಾರುಗಳ ಸಾಕಾಣೆ, ಅಗತ್ಯ ನೀರು, ಮೇವು ಪೂರೈಸಲು ಕ್ರಮವಹಿಸಲಾಗಿದೆ. ಈಗಾಗಲೇ ಹೊಸದುರ್ಗ ತಾಲೂಕಿನ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಟಿ ಚಟುವಟಿಕೆ ಚುರುಕಾಗಿದೆ. ಬಿತ್ತನೆ ಬೀಜ, ರಸಗೊಬ್ಬರ, ಔಷಧಗಳು ದಾಸ್ತಾನಿಕರಿಸಲಾಗಿದೆ. ಅಲ್ಲದೆ, ಸದ್ಯ ಯಾವುದೇ ಕೊರತೆ ಇಲ್ಲ. ಸಕಾಲದಲ್ಲಿ ಮಳೆ ಸುರಿಯುತ್ತಿರುವ ಕಾರಣ ಜಲಮೂಲಗಳಿಗೆ ಗಣನೀಯ ಪ್ರಮಾಣದ ನೀರಿನ ಹರಿವು ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.

ಜಿಪಂ ಸಿಇಒ ಸೋಮಶೇಖರ್, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net