ಅಧಃಪತನದತ್ತ ಸಾಗಿದೆ ಮೌಲ್ಯ: ಡಾ.ಪ್ರತಿಮಾ ಮೂರ್ತಿ ಕಳವಳ

2
Published on

ಮೈಸೂರು: ಈಗಿನ ಕಾಲದಲ್ಲಿ ಕೇವಲ ದುಡ್ಡೇ ಯಶಸ್ಸು ಅನ್ನೋ ಹಾಗೆ ಆಗಿದ್ದು, ಮೌಲ್ಯ ಅಧಃಪತನದತ್ತ ಸಾಗಿದೆ ಎಂದು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ ಕಳವಳ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಮಾನಸಗಂಗೋತ್ರಿಯ ವಿಜ್ಞಾನಭವನದಲ್ಲಿ ಸೋಮವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ‘ಯಶಸ್ಸನ್ನು ಸಾಧಿಸುವುದು’ ಕುರಿತು ಉಪನ್ಯಾಸ ನೀಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಎಲ್ಲರಿಗೂ ಸುಲಭವಾಗಿ ದೊರೆಯಬೇಕಾಗಿದೆ. ಈ ಹಾದಿಯಲ್ಲಿ ಮಾನಸಿಕ ಒತ್ತಡ ಸಹಜವಾಗಿ ಎದುರಾಗಲಿದೆ, ಅದರ ನಿರ್ವಹಣೆ ಮುಖ್ಯ. ಗುರಿ ಮುಟ್ಟುವುದಷ್ಟೇ ಯಶಸ್ಸು ಅಲ್ಲ, ಬದುಕಿನ ವಿವಿಧ ಮಜಲು ಅನುಭವಿಸಬೇಕು. ಸಾಧನೆಯೊಂದಿಗೆ ಸಾರ್ಥಕತೆ ಮುಖ್ಯ, ಅರ್ಥಪೂರ್ಣ ಬದುಕು ಕಂಡುಕೊಳ್ಳಬೇಕು ಎಂದರು.

ಯಶಸ್ಸು ಎಂಬುದು ತಕ್ಷಣಕ್ಕೆ ಸಿಗುವುದಿಲ್ಲ, ಅದಕ್ಕಾಗಿ ನಿರಂತರ ಪರಿಶ್ರಮ ಹಾಗೂ ಬದ್ಧತೆ ಇರಬೇಕು. ಸಮಾಜಕ್ಕೆ ಒಳಿತು ಉಂಟು ಮಾಡುವ ಮೂಲಕ ಶಿಕ್ಷಕರು ಬದುಕಿನ ಸಾರ್ಥಕತೆ ಕಾಣಬೇಕು ಎಂದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಮಾತನಾಡಿ, ಶಿಕ್ಷಕರು ಸಮಾಜದ ಆಧಾರ ಸ್ತಂಭಗಳು. ಶಿಕ್ಷಕರಿಲ್ಲದಿದ್ದರೆ ವಕೀಲರು, ಐಟಿ, ವೈದ್ಯರಿಲ್ಲ. ಐಎಎಸ್ ಅಧಿಕಾರಿ, ಸಂಶೋಧಕರು, ಗಗನಯಾತ್ರಿಯೂ ಸೃಷ್ಟಿಯಾಗುವುದಿಲ್ಲ. ಶಿಕ್ಷಕರು ತೋರಿಸುವ ಹಾದಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಆದ್ದರಿಂದ ಶಿಕ್ಷಕರು ಶಿಕ್ಷಣದ ಜತೆಗೆ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಯೋಚಿಸಿ ಮಾರ್ಗದರ್ಶನ ನೀಡಬೇಕಾಗಿದೆ ಎಂದರು.

ಮಂಡ್ಯದ ಚಿನ್ಮಯ ಮಿಷನ್‌ನ ಆದಿತ್ಯಾನಂದಜೀ ಮಾತನಾಡಿದರು. ಮೈವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net