

ಗಂಗಾಧರ್ ಬೈರಾಪಟ್ಟಣ ರಾಮನಗರ
ಇತಿಹಾಸದ ಕಾಲಗರ್ಭದಲ್ಲಿ ಭಾರತೀಯ ಸಂಸತಿಯ ಅದೆಷ್ಟೋ ಕುರುಹುಗಳು ಕಣ್ಮರೆಯಾಗಿವೆ. ಕೆಲವು ಕಾಲಕ್ಕೆ ತಕ್ಕಂತೆ ಬದಲಾವಣೆಯನ್ನು ಹೊಂದುತ್ತಾ, ಇಂದಿಗೂ ತಮ್ಮ ಇರುವಿಕೆಯನ್ನು ಸಾರುತ್ತಾ ಸಾಗುತ್ತಿವೆ. ಇಂತಹ ಅದ್ಬುತ ಕ್ಷೇತ್ರಗಳಲ್ಲೊಂದು ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಳೂರು ಗ್ರಾಮದ ಶ್ರೀ ರಾಮಾಪ್ರಮೇಯ ದೇವಾಲಯ.
ಪುರಾಣ, ಇತಿಹಾಸಗಳನ್ನು ತಮ್ಮ ಒಡಲಲ್ಲಿ ಇಟ್ಟುಕೊಂಡು ಭಕ್ತಿ ಹಾಗೂ ಕಲೆಯ ವೈಭವವನ್ನೂ ಈಗಲೂ ಜಗತ್ತಿಗೆ ಸಾರುತ್ತಿರುವ ಮಳೂರು ಗ್ರಾಮ, ರಾಮಪ್ರೇಮ ಮತ್ತು ಅಂಬೆಗಾಲು ಕೃಷ್ಣನ ಮೂಲಕ ಪ್ರತಿದಿನ ಭಕ್ತ ಸಾಗರವನ್ನೇ ತನ್ನತ್ತ ಸೆಳೆಯುತ್ತಿದೆ.
ರೋಚಕ ಕಥೆ ಇದೆ: ಮಳೂರು ಈ ಹೆಸರಿನ ಹಿಂದೆಯೇ ರೋಚಕ ಕತೆಯಿದೆ. ಹಿಂದೆ ಸಾರಂಗಧರನೆಂಬ ರಾಜನಿದ್ದ. ಇವನ ಕೈ ಕಾಲುಗಳನ್ನು ಶತ್ರುಗಳು ಕತ್ತರಿಸಿ ಊರಿಗೆ ಹೊಂದಿಕೊಂಡೇ ಇರುವ ನಿರ್ಮಲಾ ನದಿಗೆ (ಕಣ್ವ ನದಿ) ಎಸೆದು ಬಿಡುತ್ತಾರೆ. ಈ ವೇಳೆ ತನ್ನ ವೇದನೆ ನಡುವೆಯೂ ಸಾರಂಗಧರ ಅಪ್ರಮೇಯ ಸ್ವಾಮಿಯನ್ನು ಎಡೆಬಿಡದೆ ಪ್ರಾರ್ಥಿಸುತ್ತಾನೆ. ದೇವರ ಅನುಗ್ರಹದಿಂದಾಗಿ ಕತ್ತರಿಸಲ್ಪಟ್ಟ ರಾಜನ ಕೈ ಕಾಲುಗಳು ಮೊಳೆತು ಹಿಂದಿನ ರೂಪಕ್ಕೆ ಬರುತ್ತವೆ. ಇದರಿಂದ ಈ ಗ್ರಾಮಕ್ಕೆ ಮುಳೈತ್ತೂರು ಎಂದು ಹೆಸರು ಬಂತು ಎಂಬುದು ಹಿನ್ನೆಲೆ. ಕಾಲಾ ನಂತರದಲ್ಲಿ ಇದೇ ಮಳೂರು ಆಗಿ ಬದಲಾಗಿದೆ. ಇದರ ಹೊರತಾಗಿಯೂ ಪ್ರಾಚಿನ ಧರ್ಮ ಗ್ರಂಥಗಳಲ್ಲಿ ಈ ಕ್ಷೇತ್ರಕ್ಕೆ ದಣ ಅಯೋಧ್ಯಾ, ಚತುರ್ವೇದ ಮಂಗಳಪುರ, ಜ್ಞಾನಮಂಟಪ ಕ್ಷೇತ್ರ, ರಾಜೇಂದ್ರಸಿಂಹ ನಗರಿ, ದಣ ಕಾಶಿ ಎಂತಲೂ ಉಲ್ಲೇಖಿಸಲಾಗಿದೆ.
ಇಷ್ಟಲ್ಲದೆ ಬ್ರಹ್ಮಾಂಡ ಪುರಾಣದ ಪ್ರಕಾರ ಈ ಕ್ಷೇತ್ರದ ಮಹಿಮೆ ಜ್ಞಾನಮಂಟಪ ಕ್ಷೇತ್ರ ಮಹಾತ್ಮೆ ಎಂಬುದಾಗಿ 12 ಅಧ್ಯಾಯಗಳಲ್ಲಿ ವರ್ಣಿತವಾಗಿದೆ. ಶ್ರೀ ಅಪ್ರಮೇಯ ಸ್ವಾಮಿ ದೇವರು ನಾಲ್ಕು ಯುಗಗಳಿಂದಲೂ ಇಲ್ಲಿಯೇ ನೆಲೆಸಿದ್ದಾರೆ ಎನ್ನುವ ಉಲ್ಲೇಖವೂ ಇದೆ. ಕೃತಯುಗದಲ್ಲಿ ಕಾಶಿ ರಾಜನಾದ ವಿಜಯ ಪಾಲನು, ತ್ರೇತಾಯುಗದಲ್ಲಿ ಶ್ರೀ ರಾಮ ಹಾಗೂ ಕಣ್ವ ಮಹರ್ಷಿಗಳು, ದ್ವಾಪರ ಯುಗದಲ್ಲಿ ಲಂಬಕರ್ಣ ಮಹರ್ಷಿ, ಕಲಿಯುಗದಲ್ಲಿ ವಿಜ್ಞಾನೇಶ್ವರರು ಇಲ್ಲಿ ದೇವರನ್ನು ಅರ್ಚಿಸಿದ್ದಾರೆ.
ಹುಬ್ಬೇರಿಸುವ ವಾಸ್ತು ತಂತ್ರಜ್ಞಾನ: ಇನ್ನು ಮಳೂರಿನಲ್ಲಿರುವ ದೇವಾಲಯದ ನಿರ್ಮಾಣ ಪ್ರಾಚಿನ ತಂತ್ರಜ್ಞಾನದ ಬಗ್ಗೆ ಹುಬ್ಬೇರುವಂತೆ ಮಾಡುತ್ತದೆ. ಸುಮಾರು 1600 ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯ ಸುಮಾರು ಸಾವಿರ ವರ್ಷಗಳ ಹಿಂದೆ ಚೋಳದೊರೆ ರಾಜಾಧಿರಾಜ ಚೋಳನ ಕಾಲದಲ್ಲಿ ಜೀಣೋರ್ದ್ಧಾರಗೊಂಡಿದೆ. ಈ ದೇವಾಲಯವನ್ನು ಯಾವುದೇ ಅಡಿಪಾಯ ಇಲ್ಲದೆ ಸಂಪೂರ್ಣ ಮರಳಿನ ಮೇಲೆ ನಿರ್ಮಿಸಲಾಗಿದೆ. ಬ್ರಹ್ಮ ರಥೋತ್ಸವದ ದಿನದಂದು ಶ್ರೀ ಅಪ್ರಮೇಯ ಸ್ವಾಮಿ ಮೂಲ ವಿಗ್ರಹದ ಮೇಲೆ ಮುಂಜಾನೆ ಸೂಯೋರ್ದಯದಲ್ಲಿ ಸೂರ್ಯ ರಶ್ಮಿಗಳು ಬೀಳುವುದು ಇಲ್ಲಿನ ಮತ್ತೊಂದು ವಿಶೇಷ. ವಿಜಯನಗರ ಸಾಮ್ರಾಜ್ಯದ ರಾಜರ ಕಾಲದಲ್ಲಿಯೂ ಈ ದೇವಾಲಯ ಜೀಣೋರ್ದ್ಧಾರಗೊಂಡಿದೆ ಎನ್ನುವುದಕ್ಕೆ ದೇವಾಲಯದ ಆವರಣದಲ್ಲಿ ಇರುವ ವಿಜಯನಗರ ಸಾಮಂತ ರಾಜ ರಾಮದಾಸ ಮತ್ತು ರಾಣಿ ಮಂಚಲಕ್ಷ$್ಮಮ್ಮ ಅವರ ಶಿಲಾ ಪ್ರತಿಮೆಗಳಿವೆ.
ಶ್ರೀ ರಾಮಾಪ್ರಮೇಯ:
ಶ್ರೀ ರಾಮನು ಇಲ್ಲಿಗೆ ಭೇಟಿ ನೀಡಿ ಅನೇಕ ವರ್ಷಗಳ ಕಾಲ ಇಲ್ಲಿಯೇ ವಾಸ್ತವ್ಯ ಹೂಡಿ ಸ್ವಾಮಿಯನ್ನು ಆರಾಧಿಸಿದ ಕಾರಣದಿಂದಾಗಿ ಅಪ್ರಮೇಯನನ್ನು ಶ್ರೀ ರಾಮಾಪ್ರಮೇಯ ಎಂದು ಕರೆಯಲಾಗುತ್ತದೆ. ಈ ಮೂರ್ತಿಯು ಸಾಲಿಗ್ರಾಮ ಶಿಲೆಯಿಂದ ನಿರ್ಮಾಣವಾಗಿದೆ. ಚತುರ್ಭುಜಾಕಾರದ ಈ ಸ್ವಾಮಿಯ ಮೇಲಿನ ಎರಡು ಕೈಗಳಲ್ಲಿ ಶಂಖ ಮತ್ತು ಚಕ್ರವನ್ನು ಹಿಡಿದಿದ್ದು, ಕೆಳಗಿನ ಎರಡು ಕೈಗಳಲ್ಲಿ ಗದೆ ಮತ್ತು ಪದ್ಮಗಳನ್ನು ಹಿಡಿದಿದ್ದಾನೆ. ಇದಲ್ಲದೇ ದೇವಾಲಯದ ಆವರಣದಲ್ಲಿ ಶ್ರೀದೇವಿ, ಭೂದೇವಿ ಸಮೇತ ಶ್ರೀ ರಾಮಪ್ರೇಮಯ ಸ್ವಾಮಿ ಪಂಚಲೋಹದ ಉತ್ಸವ ಮೂರ್ತಿಗಳು, ಶ್ರೀ ಅರವಿಂದವಲ್ಲಿ ತಾಯಾರ್ (ಶ್ರೀ ಲಕ್ಷಿ$್ಮ ಅಮ್ಮನವರು) ಮೂಲ ವಿಗ್ರಹ, ಅತ್ಯಂತ ಪ್ರಸಿದ್ಧ ಅಂಬೇಗಾಲು ಶ್ರೀ ನವನೀತ ಕೃಷ್ಣನ ಸಾಲಿಗ್ರಾಮ ಶಿಲೆಯ ವಿಗ್ರಹ ಹಾಗೂ ಆಳ್ವಾರ್ ಆಚಾರ್ಯರ ವಿಗ್ರಹಗಳು ಇವೆ.
ಸಂತಾನ ಪ್ರಾಪ್ತಿಗೆ ಅಂಬೆಗಾಲು ಕೃಷ್ಣ: ಶ್ರೀ ರಾಮಾಪ್ರಮೇಯ ಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ಇರುವ ಅಂಬೆಗಾಲು ಶ್ರೀ ನವನೀತ ಕೃಷ್ಣಮೂರ್ತಿ ಭಕ್ತರ ಪಾಲಿನ ಆರಾಧ್ಯ ದೈವ. ಸಂತಾನವಿಲ್ಲದವರು ಇಲ್ಲಿಗೆ ಬಂದು ಬೇಡಿಕೊಂಡರೆ, ಸಂತಾನ ಪ್ರಾಪ್ತಿ ಆಗುತ್ತದೆ ಎನ್ನುವುದು ನಂಬಿಕೆ. ಇದು ನಿಜವೂ ಹೌದು ಎನ್ನುವುದಕ್ಕೆ ಹರಕೆ ತೀರಿಸಲು ಇಲ್ಲಿ ಕಟ್ಟಲಾಗಿರುವ ತೊಟ್ಟಿಲುಗಳೇ ಸಾಯಾಗಿವೆ. ಸಾಲಿಗ್ರಾಮ ಶಿಲೆಯಲ್ಲಿ ಕೆತ್ತಲ್ಪಟ್ಟಿರುವ ಈ ಭವ್ಯ ಮೂರ್ತಿಯನ್ನು ಶ್ರೀ ವ್ಯಾಸರಾಯರು ಪ್ರತಿಷ್ಠಾಪಿಸಿದರು ಎಂದು ಹೇಳಲಾಗಿದ್ದು, ಶ್ರೀ ರಾಮಾನುಜಾಚಾರ್ಯರು ಸಹ ಇಲ್ಲಿ ಶ್ರೀ ಕೃಷ್ಣನ ಸೇವೆ ಮಾಡಿದ್ದಾರೆ ಎನ್ನುತ್ತಾರೆ ಅರ್ಚಕರು. ದಾಸಶ್ರೇಷ್ಠ ಪುರಂದರ ದಾಸರು ಭಕ್ತಿಯ ಪ್ರಸಿದ್ಧ ಕೀರ್ತನೆ "ಜಗದ್ದೋದ್ಧಾರನ ಆಡಿಸಿದಳೆಶೋದೆ' ನವನೀತ ಕೃಷ್ಣನನ್ನು ಚೆಲುವಿನ ಸೊಬಗನ್ನು ತಮ್ಮ ಭೇಟಿಯ ವೇಳೆ ಕಂಡು ಕಟ್ಟಿದ ಕೀರ್ತನೆ ಎನ್ನುತ್ತಾರೆ ಅರ್ಚಕರು. ನಾಳೆ ಬ್ರಹ್ಮ ರಥೋತ್ಸವ: ಪ್ರತಿವರ್ಷ ಮೇಷ ಮಾಸ ಹಸ್ತಾ ನಕ್ಷತ್ರದಂದು ಬ್ರಹ್ಮ ರಥೋತ್ಸವ ನಡೆಯುತ್ತದೆ. ಈ ಬಾರಿ ಏ.15ರ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಬ್ರಹ್ಮರಥೋತ್ಸವ ನಡೆಯಲಿದ್ದು, ಚನ್ನಪಟ್ಟಣ ತಾಲೂಕಿನ ಜನತೆ ಮಾತ್ರವಲ್ಲದೆ, ಪಕ್ಕದ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗಿ ಆಗುತ್ತಾರೆ. ತಲುಪುವುದು ಹೇಗೆ?: ಬೆಂಗಳೂರು & ಮೈಸೂರು ಹೆದ್ದಾರಿಯ ಪಕ್ಕದಲ್ಲಿಯೇ ಅಪ್ರಮೇಯ ಸ್ವಾಮಿ ದೇವಾಲಯವಿದೆ. ಬೆಂಗಳೂರಿನಿಂದ ಮೈಸೂರಿಗೆ ಸಾಗುವ ಮಾರ್ಗದಲ್ಲಿ ಚನ್ನಪಟ್ಟಣ ನಗರದಿಂದ ಮೈಸೂರು ಕಡೆಗೆ ಕೇವಲ 3&3.50 ಕಿಮೀ ದೂರದಲ್ಲಿ ಈ ದೇವಾಲಯವಿದೆ. ಹೆಚ್ಚಿನ ಹುಡುಕಾಟವಿಲ್ಲದೆ ಶ್ರೀ ಕ್ಷೇತ್ರವನ್ನು ತಲುಪಬಹುದು.
ಶ್ರೀರಾಮನಿಂದ ಪೂಜಿಸಲ್ಪಟ್ಟ ಶ್ರೀ ರಾಮಾಪ್ರೇಮಯ ದೇವರು ಪುರಾಣ ಪ್ರಸಿದ್ಧವಾದದ್ದು. ವಿಶಿಷ್ಟ ತಂತ್ರಜ್ಞಾನದೊಂದಿಗೆ ಈ ದೇವಾಲಯ ನಿರ್ಮಾಣ ಮಾಡಲಾಗಿರುವುದು ನಮ್ಮ ಹೆಮ್ಮೆ. ಪುರಂದರ ದಾಸರನ್ನು ಆಕರ್ಷಿಸಿದ ಅಂಬೇಗಾಲು ಶ್ರೀ ನವನೀತ ಕೃಷ್ಣ ಭಕ್ತರ ಪಾಲಿನ ಆರಾಧ್ಯ ದೈವ. ರಥೋತ್ಸವದಲ್ಲಿ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು. ಎಂ.ಎನ್. ಕೃಷ್ಣ ಕುಮಾರ್, ಮಾಜಿ ಸಂಚಾಲಕ, ಶ್ರೀ ಕ್ಷೇತ್ರ ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಗಳಿಂದಾಗಿ ಪೂಜಾ ಕೈಂಕರ್ಯಗಳು ನಡೆದಿರಲಿಲ್ಲ. ಈ ಬಾರಿ ಸೋಂಕು ನಿಯಂತ್ರಣದಲ್ಲಿ ಇರುವ ಕಾರಣದಿಂದಾಗಿ ವಿಜೃಂಭಣೆಯಿಂದ ಬ್ರಹ್ಮ ರಥೋತ್ಸವ ಮತ್ತು ಜಾತ್ರೆ ಹಮ್ಮಿಕೊಳ್ಳಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು. ತಮ್ಮಣ್ಣ, ಕಾರ್ಯನಿರ್ವಾಹಕ ಅಧಿಕಾರಿ, ಶ್ರೀ ರಾಮಾಪ್ರಮೇಯ ದೇವಾಲಯ, ಮಳೂರು ಶ್ರೀ ರಾಮಾಪ್ರಮೇಯ ಮತ್ತು ಅಂಬೆಗಾಲು ಶ್ರೀ ಕೃಷ್ಣ ದೇವರು ಭಕ್ತರ ಪಾಲಿನ ನೆಚ್ಚಿನ ದೇವರಾಗಿವೆ. ಪುರಾಣದಿಂದಲೂ ಈ ದೇವರುಗಳು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾರೆ. ದೇವರ ಕೃಪೆಗೆ ಒಳಗಾಗಬೇಕು ಎನ್ನುವುದು ಎಲ್ಲರ ಹಂಬಲ, ಪ್ರತಿಯೊಬ್ಬರೂ ದೇವರ ದರ್ಶನ ಪಡೆದು ಪುನೀತರಾಗಬೇಕು. ಜಿ.ರಾಧಾಕೃಷ್ಣ ಭಟ್ಟಾಚಾರ್ಯ, ಪ್ರಧಾನ ಅರ್ಚಕ