ಅದ್ದೂರಿ ಸ್ವಾತಂತ್ರ್ಯ ದಿನೋತ್ಸವ ಆಚರಣೆಗೆ ನಿರ್ಧಾರ

web4
ರಾಮದುರ್ಗ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಸ್ವಾತಂತ್ರೊೃೀತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಮಾತನಾಡಿದರು. ಪ್ರವೀಣಕುಮಾರ ಸಾಲಿ, ಪಿ.ಡಿ ಕಾಲವಾಡ, ಎಸ್.ಪಿ ಖಾತೇದಾರ ಇತರರು ಇದ್ದರು.
Published on

ರಾಮದುರ್ಗ: ಪ್ರತಿವರ್ಷದಂತೆ ಸ್ವಾತಂತ್ರ್ಯ ದಿನೋತ್ಸವನ್ನು ಅದ್ದೂರಿಯಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದ್ದು, ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ವಿನಾಕಾರಣ ಕಾರ್ಯಕ್ರಮದಿಂದ ತಪ್ಪಿಸಿಕೊಳ್ಳದೇ ಕಡ್ಡಾಯವಾಗಿ ಹಾಜರಿಸಬೇಕು ಎಂದು ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದ ತಹಸೀಲ್ದಾರ್ ಕಾರ್ಯಾಲಯದಲ್ಲಿ 76 ಸ್ವಾತಂತ್ರ್ಯ ದಿನೋತ್ಸವದ ಪ್ರಯುಕ್ತ ಶುಕ್ರವಾರ ಏರ್ಪಡಿಸಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾಟಾಚಾರಕ್ಕೆ ಆಚರಣೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುವುದು ಬೇಡ. ಹಬ್ಬದ ರೀತಿಯಲ್ಲಿ ರಾಷ್ಟ್ರೀಯ ಕಾರ್ಯಕ್ರಮವನ್ನು ಆಚರಣೆ ಮಾಡುವ ನಿಟ್ಟಿನಲ್ಲಿ ಆಯಾ ಇಲಾಖೆಗೆ ವಹಿಸಿದ ಜವಾಬ್ಧಾರಿಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲನೆ ಮಾಡಬೇಕು ಎಂದರು.

ಆ.15ರಂದು ವಿವಿಧ ಇಲಾಖೆಗಳಲ್ಲಿ ಬೆಳಗ್ಗೆ 7.15 ಗಂಟೆಗೆ ಸಮಯಕ್ಕೆ ಸರಿಯಾಗಿ ಧ್ವಜಾರೋಹಣ ನೆರವೇರಿಸಿಕೊಂಡು ತಹಸೀಲ್ದಾರ್ ಕಾರ್ಯಾಲಯ, ಶಾಸಕರ ನೇತೃತ್ವದ ಸಾರ್ವಜನಿಕ ಧ್ವಜಾರೋಹಣ ಹಾಗೂ ಅರಮನೆ ಆವರಣದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು.
ಒಂದು ವೇಳೆ ಕುಂಟು ನೆಪ ಪ್ರದರ್ಶಿಸಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮಕ್ಕೆ ಗೈರಾದರೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣಕುಮಾರ ಸಾಲಿ ಮಾತನಾಡಿ, ಅರಮನೆ ಆವರಣದಲ್ಲಿ ವ್ಯವಸ್ಥಿತ ಕಾರ್ಯಕ್ರಮಕ್ಕೆ ಎಲ್ಲ ಇಲಾಖೆಯ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಸಹಕಾರ ನೀಡಿ, ಕಾರ್ಯಕ್ರಮದ ಯಶಸ್ಸಿಗೆ ಕೆಲಸ ನಿರ್ವಹಿಸಬೇಕು ಎಂದರು.

ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿ ಪಿ.ಡಿ ಕಾಲವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರೇಡ್-2 ತಹಸೀಲ್ದಾರ್ ಎಸ್.ಪಿ ಖಾತೇದಾರ ಹಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net