

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಗ್ರಹಿಸಿದರು.
ಇದು ಅದ್ದೂರಿಯೂ ಹೌದು, ಜತೆಗೆ ಅಧ್ವಾನದ ದಸರಾ ಕೂಡ. ಮುಂದಿನ ದಿನಗಳಲ್ಲಿ ಲೆಕ್ಕ ಕೊಡುವುದು ಅಷ್ಟೇ ಅಲ್ಲ, ದಸರಾ ಬಗ್ಗೆ ಮರುವಿಮರ್ಶೆಯಾಗಬೇಕು. ಮುಂದಿನ ದಿನಗಳಲ್ಲಿ ಕೆಲ ತಿದ್ದುಪಡಿಯಾಗಬೇಕು. ಜತೆಗೆ, ದಸರಾ ಪ್ರಾಧಿಕಾರ ಕಡ್ಡಾಯವಾಗಿ ಆಗಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಅನುಭವದ ಕೊರತೆ. ಮೈಸೂರಿನವರು ಜಿಲ್ಲಾ ಮಂತ್ರಿಯಾಗದಿರುವುದು ಅಧ್ವಾನ ದಸರಾ ಆಗಲು ಕಾರಣ ಎಂದು ಸ್ವಪಕ್ಷದವರ ವಿರುದ್ಧ ಆರೋಪ ಮಾಡಿದರು.
ಈ ಸಲ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಶಾಸಕ ಎಸ್.ಎ.ರಾಮದಾಸ್ ದಸರಾ ಕಾರ್ಯಕ್ರಮಗಳಿಗೆ ಹೋಗಲಿಲ್ಲ. ಸ್ಥಳೀಯ ಸಾಹಿತಿಗಳನ್ನೂ ಗಣನೆಗೆ ತೆಗದುಕೊಳ್ಳಲಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.
ಜಂಬೂಸವಾರಿ ಮೆರವಣಿಗೆಗೆ ಜನರು ನುಗ್ಗಿದ್ದರು. ಅದೃಷ್ಟಕ್ಕೆ ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಏನೂ ಆಗಲಿಲ್ಲ. ಒಂದು ವೇಳೆ ಅನಾಹುತ ಸಂಭವಿಸಿದರೆ ಯಾರು ಜವಾಬ್ದಾರಿ? ಬಿಜೆಪಿ ಸರ್ಕಾರ ಬಂದರೆ ನಮ್ಮವರಿಗೆ ದಸರಾ ನಡೆಸುವ ಜವಾಬ್ದಾರಿ ಸಿಗಲ್ಲ ಎಂದು ಕಿಡಿಕಾರಿದರು.
ದಸರಾ ನೋಡಲು ಜನರು ಸ್ವಯಂಪ್ರೇರಿತರಾಗಿ ಬಂದಿದ್ದಾರೆಯೇ ಹೊರತು ಕಾರ್ಯಕ್ರಮಗಳಿಂದಲ್ಲ. ದಸರಾಗೆ 35 ಕೋಟಿ ರೂ. ನೀಡಲಾಗಿದೆ. ಆದ್ಯಾಗಿಯೂ ಅನುದಾನ ಕೊರತೆ ಉಂಟಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲದೆ ದಸರೆ ಸೊರಗಿತು. ಗ್ರಾಮೀಣ ದಸರಾ 3 ಲಕ್ಷ ರೂ. ನಿಗದಿಪಡಿಸಿ ಕೊನೆಗೆ ಒಂದೂವರೆ ಲಕ್ಷ ರೂ. ಕೊಟ್ಟಿದ್ದಾರೆ. ಇದರಿಂದ ಗ್ರಾಮೀಣ ದಸರಾ ವ್ಯವಸ್ಥಿತವಾಗಿ ನಡೆಯಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕ್ರೀಡಾ ದಸರಾದಲ್ಲಿ ಉತ್ಸಾಹ ಕಾಣಲಿಲ್ಲ. ಮ್ಯಾರಥಾನ್ ಕೂಡ ನಡೆಯಲಿಲ್ಲ. ಹಣದ ಕೊರತೆಯಿಂದ ಸರಿಯಾಗಿ ಆಯೋಜಿಸಲಿಲ್ಲ. ಕ್ರೀಡಾಪಟುಗಳ ಉತ್ಸಾಹದ ಉತ್ಸವ ಆಗಲಿಲ್ಲ ಎಂದು ಕಿಡಿಕಾರಿದರು.
ದಸರಾ ಕವಿಗೋಷ್ಠಿಯಲ್ಲಿ ಸತ್ತವರ ಹೆಸರು ಹಾಕಿದ್ದರು. ನಾನು ಸಾಹಿತ್ಯ ಕ್ಷೇತ್ರದಿಂದ ಆಯ್ಕೆ ಆಗಿದ್ದೇನೆ. ನನಗೆ ದಸರಾ ಮಾಡಿದ ಅನುಭವ ಇತ್ತು. ನನ್ನ ಸಲಹೆ ಕೇಳಲಿಲ್ಲ ಎಂದು ಗುಡುಗಿದರು.
ಯುವ ದಸರಾದಲ್ಲಿ ಗಾಯಕ ಸೋನು ನಿಗಮ್‌ಗೆ 40 ಲಕ್ಷ ರೂ.ಗಳನ್ನು ಕೊಟ್ಟಿದ್ದಾರೆ. ಸ್ಥಳೀಯರಿಗೆ ಅವಕಾಶ ನೀಡಲಿಲ್ಲ. ಪುನೀತ್ ರಾಜ್‌ಕುಮಾರ್ ಕುಟುಂಬ ಬಂದಾಗ ಎಷ್ಟು ಜನಸಾಗರ ಬಂದಿತ್ತು. ನಟ ಯಶ್ ನಮ್ಮೂರ ಹುಡುಗ. ಅವರಿಗೆ ಅವಕಾಶ ಕೊಡಲಿಲ್ಲ ಎಂದು ಹರಿಹಾಯ್ದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸಿರುವುದು ಸ್ವಾಗತಾರ್ಹ. ಈ ಬಗ್ಗೆ ವಿಸ್ಕೃತ ಚರ್ಚೆಯಾಗಬೇಕು. ವಿಶ್ವನಾಥ್ ಮಗ, ಮಲ್ಲಿಕಾರ್ಜುನ ಖರ್ಗೆ ಮಕ್ಕಳಿಗೆ ಮೀಸಲಾತಿ ಇದರ ಬಗ್ಗೆಯೂ ಚರ್ಚೆಯಾಗಬೇಕು. ಇದರ ಭರಾಟೆಯಲ್ಲಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ಕಸಿಯುವ ಕೆಲಸ ಆಗಬಾರದು ಎಂದರು
ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗ 2ಎ ಮೀಸಲಾತಿ ಪಟ್ಟಿಗೆ ಸೇರಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಮೀಸಲಾತಿ ಸೌಲಭ್ಯ ಹೇಳುವುದಕ್ಕೆ ಎಲ್ಲರಿಗೂ ಹಕ್ಕಿದೆ. ಎಲ್ಲ ಸಮಾಜದವರು ಮೀಸಲಾತಿ ಕೇಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮತದಾರರು ಮಾಲೀಕರಾಗಿ ಉಳಿದಿಲ್ಲ. ಮಠಮಾನ್ಯಗಳು ಮಾಲೀಕರಾಗಿದ್ದಾರೆ. ನಮ್ಮ ಮಾಲೀಕರು ಮಠ ಹಾಗೂ ಮಾಧ್ಯಮಗಳಾಗಿವೆ. ಮಠಗಳಲ್ಲೇ ಈಗ ಯಾರು ಸಿಎಂ ಎಂಬುದು ನಿರ್ಧಾರವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರು- ಮೈಸೂರು ನಡುವಿನ ಟಿಪ್ಪು ರೈಲಿಗೆ ಒಡೆಯರ್ ಹೆಸರು ಬದಲಾವಣೆ ಮಾಡಿರುವುದಕ್ಕೆ ಆಕ್ಷೇಪ ಮಾಡುವುದಿಲ್ಲ. ಟಿಪ್ಪುವಿನ ಹೆಸರನ್ನು ಮನಸ್ಸಿನಿಂದ ತೆಗೆದು ಹಾಕಲು ಸಾಧ್ಯವಿಲ್ಲ. ಟಿಪ್ಪುವಿನ ಹೋರಾಟ ಅಜರಾಮರ. ಯದುವಂಶದ ಹೋರಾಟ ಕೂಡ ಅಜರಾಮರ. ಹೆಸರು ಬದಲಾವಣೆಯಿಂದ ಏನು ಪ್ರಯೋಜನವಾಗುವುದಿಲ್ಲ ಎಂದರು.ಸಂಸದ ಪ್ರತಾಪ್ ಸಿಂಹ ಅವರು ಮೈಸೂರು ಮಹಾರಾಜರನ್ನು ಹೊರತುಪಡಿಸಿದರೆ ನಾನು ಹೆಚ್ಚು ಕೆಲಸ ಮಾಡಿದ್ದೇನೆ ಅಂಥ ಹೇಳುತ್ತಾರೆ. ಅವರ ಬಗ್ಗೆ ನಾನು ಏನು ಹೇಳಲ್ಲ ಎಂದು ಎಚ್.ವಿಶ್ವನಾಥ್ ಕುಟುಕಿದರು.