

ಕಮಲನಗರ: ಈ ಬಾರಿ ಗಣರಾಜ್ಯೋತ್ಸವ ಸಮಾರಂಭವನ್ನು ಅದ್ದೂರಿ ಹಾಗೂ ಅಚ್ಚುಕಟ್ಟಾಗಿ ಆಚರಿಸಲು ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ ಸೂಚಿಸಿದರು.
ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ೭೬ನೇ ಗಣರಾಜ್ಯೋತ್ಸ ಆಚರಣೆ ಸಂಬಂಧ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾರಂಭವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಗುವುದು. ೨೬ರಂದು ಬೆಳಗ್ಗೆ ೮.೪೫ಕ್ಕೆ ಧ್ವಜಾರೋಹಣ ನೆರವೇರಿಸಿ, ವೇದಿಕೆ ಕಾರ್ಯಕ್ರಮ ಆರಂಭಿಸಲಾಗುವುದು ಎಂದರು.
ಪ್ರೌಢ ಶಾಲೆ ಮಕ್ಕಳಿಗಾಗಿ ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಆಯೋಜಿಸಬೇಕು. ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ಮಕ್ಕಳನ್ನು ತಾಲೂಕು ಆಡಳಿತದಿಂದ ಸನ್ಮಾನಿಸಲಾಗುವುದು. ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲು ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದರು.
ಕ್ರೀಡಾಂಗಣದ ಸ್ವಚ್ಛತೆ, ವೇದಿಕೆ, ಶಾಮಿಯಾನ, ಆಸನ ವ್ಯವಸ್ಥೆ ಕುರಿತಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ಕಾರ್ಯಕ್ರಮದ ಸಂದರ್ಭದಲ್ಲಿ ವಿದ್ಯುತ್ ಅಡಚಣೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲು ಮುಖ್ಯ ಶಿಕ್ಷಕಿ ಸವಿತಾ ಬಿರಾದಾರ ಅವರನ್ನು ಆಯ್ಕೆ ಮಾಡಲಾಯಿತು.
ಗ್ರಾಪಂ ಅಧ್ಯಕ್ಷೆ ಸುಶೀಲಾ ಸಜ್ಜನ್, ತಾಪಂ ಸಹಾಯಕ ನಿರ್ದೇಶಕ ಹಣಮಂತರಾಯ ಕೌಟಗೆ, ಸಿಪಿಐ ಅಮರೆಪ್ಪ ಎಸ್, ಪಿಎಸ್‌ಐ ಚಂದ್ರಶೇಖರ ನಿರ್ಣೆ, ಕಸಾಪ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ, ಪ್ರೊ.ಎಸ್.ಎನ್.ಶಿವಣಕರ, ಡಾ.ಎಸ್.ಎಸ್.ಮೈನಾಳೆ, ವಿಠ್ಠಲರಾವ ಪಾಟೀಲ್, ಸಿಡಿಪಿಒ ಇಮಲಪ್ಪ ಡಿ, ಆಹಾರ ಇಲಾಖೆ ಶಿರೆಸ್ತೇದಾರ ಶಿವಾನಂದ ಪಾಟೀಲ್, ಸಮುದಾಯ ಆರೋಗ್ಯ ಕೇಂದ್ರದ ಅಡಳಿತಾಧಿಕಾರಿ ಡಾ.ಶ್ರೀಮಂತ, ವಿವಿಧ ಶಾಲೆ ಮುಖ್ಯಸ್ಥರು, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮದ ಪ್ರಮುಖರು ಇದ್ದರು.