ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆಗೆ ನಿರ್ಧಾರ

CTD--0003
Published on

ಚಿತ್ರದುರ್ಗ: ಜಿಲ್ಲಾಡಳಿತದಿಂದ ನಗರದಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದರು.

ಡಿಸಿ ಕಚೇರಿಯಲ್ಲಿ ಬುಧವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಮಾರಂಭವನ್ನು ವಿಜೃಂಭಣೆಯಿಂದ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಂದು ಬೆಳಗ್ಗೆ 7.30 ಕ್ಕೆ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ನಗರದ ನೀಲಕಂಠೇಶ್ವರ ದೇಗುಲದಿಂದ ಪ್ರಾರಂಭವಾಗಲಿದೆ. ಸ್ತಬ್ಧಚಿತ್ರಗಳ ಮೆರವಣಿಗೆ ಅರ್ಥಪೂರ್ಣವಾಗಿರಬೇಕು. ಎಸ್‌ಪಿ ನೇತೃತ್ವದ ಸ್ತಬ್ಧಚಿತ್ರ ಸಮಿತಿ, ವಿವಿಧ ಇಲಾಖೆಗಳ 10 ಅತ್ಯುತ್ತಮ ಸ್ತಬ್ಧ ಚಿತ್ರಗಳಿಗೆ ಅವಕಾಶ ನೀಡಲಿದೆ ಎಂದರು.

ಜಿಪಂ, ಕೃಷಿ, ತೋಟಗಾರಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಪ. ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕೆಎಸ್‌ಆರ್‌ಟಿಸಿ ಸ್ತಬ್ಧಚಿತ್ರಗಳು ಸರ್ಕಾರದ ಸಾಧನೆ ಸಾರ್ವಜನಿಕರಿಗೆ ತಲುಪಿಸಬೇಕೆಂದು ಸೂಚಿಸಿದರು.

ಎಡಿಸಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ನೀಲಕಂಠೇಶ್ವರ ದೇವಾಲಯದಿಂದ ಆರಂಭವಾಗುವ ಮೆರವಣಿಗೆ ಪ್ರಮುಖ ರಸ್ತೆ ಮೂಲಕ ರಾಜ್ಯೋತ್ಸವ ಸಮಾರಂಭ ಜರುಗುವ ಪೊಲೀಸ್ ಕವಾಯತು ಮೈದಾನದವರೆಗೆ ನಡೆಯಲಿದೆ ಎಂದು ಹೇಳಿದರು.

ಅಂದು ಬೆಳಗ್ಗೆ 9ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಬೆಳಗ್ಗೆ ಕವಾಯತು ಮೈದಾನದಲ್ಲಿ ಹಾಗೂ ಸಂಜೆ ತರಾಸು ರಂಗಮಂದಿರದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ‌್ಯಕ್ರಮ ನಡೆಸಿಕೊಡಲಿದ್ದಾರೆ ಎಂದರು.

ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಸನ್ಮಾನಕ್ಕಾಗಿ ಆಯ್ಕೆ ಮಾಡುವ ಸಂದರ್ಭದಲ್ಲಿ ಕ್ಷೇತ್ರವಾರು ಅವರ ಸಾಧನೆ ಪರಿಶೀಲಿಸಬೇಕು, ಆಯ್ಕೆ ಪಾರದರ್ಶಕ ಹಾಗೂ ತಾರತಮ್ಯ ರಹಿತವಾಗಿರಬೇಕು, ಮಹಿಳೆಯರಿಗೂ ಪ್ರಾಧಾನ್ಯ ನೀಡಬೇಕೆಂದು ಡಿಸಿ ಹೇಳಿದರು.

ಎಸಿ ಎಂ. ಕಾರ್ತಿಕ್, ಡಿಡಿಪಿಐ ಎಂ.ಆರ್. ಮಂಜುನಾಥ, ಆಹಾರ ಇಲಾಖೆ ಉಪನಿರ್ದೇಶಕ ಜಂಟಿನಿರ್ದೇಶಕ ಮಧುಸೂಧನ್, ನಗರಸಭೆ ಪೌರಾಯುಕ್ತೆ ಎಂ. ರೇಣುಕಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಆರ್. ಬಣಕಾರ್, ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ, ರಂಗಕರ್ಮಿ ಕೆ.ಪಿ.ಎಂ. ಗಣೇಶಯ್ಯ, ನಿವೃತ್ತ ಪತ್ರಕರ್ತ ಟಿ.ಕೆ. ಬಸವರಾಜ್ ಮತ್ತಿತರರು ಇದ್ದರು.

ಸನ್ಮಾನಕ್ಕೆ ಅರ್ಜಿ

ನವೆಂಬರ್ 1 ರಂದು ಜಿಲ್ಲಾ ಕೇಂದ್ರದಲ್ಲಿ ಆಚರಿಸುವ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಸನ್ಮಾನಿಸಲು ಉದ್ದೇಶಿಸಲಾಗಿದ್ದು, ವಿವಿಧ ಕ್ಷೇತ್ರಗಳ ಸಾಧಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕ್ರೀಡೆ, ರಂಗಭೂಮಿ, ಜಾನಪದ, ಕಲೆ ಮತ್ತು ಸಾಹಿತ್ಯ, ಸಮಾಜ ಸೇವೆ, ಮಾಧ್ಯಮ, ಸಂಗೀತ, ವೈದ್ಯಕೀಯ ಮತ್ತು ಸಂಶೋಧನೆ, ಕೃಷಿ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಹಾಗೂ ಸಾಧನೆ ಮಾಡಿರುವ ಅರ್ಹ ಸಾಧಕರು ಅರ್ಜಿಗಳನ್ನು ಅ.28 ರ ಮಧ್ಯಾಹ್ನ 12 ಗಂಟೆಯೊಳಗೆ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಿತ್ರದುರ್ಗ ಇವರಿಗೆ ತಲುಪಿಸುವಂತೆ ಎಸಿ ಎಂ. ಕಾರ್ತಿಕ್ ತಿಳಿಸಿದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net