ಅದೃಷ್ಟವಿದ್ದರೆ ಉಪಮುಖ್ಯಮಂತ್ರಿ ಆಗುವೆ ಎಂದ ಸಚಿವ ಶ್ರೀರಾಮುಲು

28-klr-13
Published on

ಕೋಲಾರ: ನಾನು ಡಿಸಿಎಂ ಆಗಬೇಕೆಂದು ಅಭಿಮಾನಿಗಳು ಬಯಸಿದ್ದಾರೆ, ಹುದ್ದೆ ನೀಡುವುದು ವರಿಷ್ಠರಿಗೆ ಬಿಟ್ಟಿದ್ದು, ಅದೃಷ್ಟವಿದ್ದರೆ ಖಂಡಿತ ಅಭಿಮಾನಿಗಳ ಆಸೆ ಈಡೇರುತ್ತದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅಭಿಪ್ರಾಯಿಸಿದರು.

ತಿರುಪತಿಯಿಂದ ಬೆಂಗಳೂರಿಗೆ ವಾಪಸಾಗುವಾಗ ತಾಲೂಕಿನ ನರಸಾಪುರ ಬೈಪಾಸ್ ಬಳಿ ಅಭಿಮಾನಿಗಳ ಸ್ವಾಗತ ಸ್ವೀಕರಿಸಿ ಮಾತನಾಡಿ, ನನ್ನ ಬಗ್ಗೆ ಅಭಿಮಾನ, ಪ್ರೀತಿ ಹೊಂದಿರುವ ನಿಮಗೆ ಆಭಾರಿಯಾಗಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ನನ್ನ ಮೇಲೆ ಅಪಾರ ಪ್ರೀತಿ, ನಂಬಿಕೆ ಇಟ್ಟಿದ್ದಾರೆ, ಆದರೆ ಡಿಸಿಎಂ ವಿಚಾರವಾಗಿ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಲೆಬಾಗುವ ನಿಷ್ಠಾವಂತ ಕಾರ್ಯಕರ್ತ ನಾನಾಗಿರುವೆ ಎಂದು ಘೋಷಣೆ ಕೂಗಿದ ಅಭಿಮಾನಿಗಳನ್ನು ಸಮಾಧಾನಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಉಪ ಚುನಾವಣೆಯಲ್ಲಿ ಗೆದ್ದವರೆಲ್ಲರೂ ಸಚಿವರಾಗಬೇಕೆಂದು ಯತ್ನಿಸಿದ್ದಾರೆ, ಯಡಿಯೂರಪ್ಪ ಸಹ ಅರ್ಹರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಶೀಘ್ರ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಈ ಸಂಬಂಧ ಮಾತುಕತೆ ನಡೆಸಿದ ಬಳಿಕ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ದಿನ ನಿಗದಿಪಡಿಸಲಾಗುತ್ತದೆ ಎಂದರು.

ಸೋತವರಿಗೆ ಸಚಿವ ಸ್ಥಾನದ ಕುರಿತು ಮಾತನಾಡುವಷ್ಟು ದೊಡ್ಡವನು ನಾನಲ್ಲ. ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಯಡಿಯೂರಪ್ಪ ತಂತ್ರ ರೂಪಿಸಲಿದ್ದಾರೆ. ನಮ್ಮ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ, ಅವಧಿ ಪೂರ್ಣಗೊಳಿಸಿ ಮತ್ತೊಂದು ಅವಧಿಗೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಸದಸ್ಯೆ ರೂಪಶ್ರೀ ಮಂಜುನಾಥ್, ಅರುಣ್ ಪ್ರಸಾದ್, ಬಿ.ವಿ.ಮಹೇಶ್, ಮಾಜಿ ಶಾಸಕ ವರ್ತೂರು ಆರ್.ಪ್ರಕಾಶ್, ಮುಖಂಡ ಬೆಗ್ಲಿ ಸೂರ್ಯಪ್ರಕಾಶ್, ಜಿಲ್ಲಾ ಸರ್ಜನ್ ಡಾ.ಎಸ್.ಜಿ. ನಾರಾಯಣಸ್ವಾಮಿ, ವಾಲ್ಮೀಕಿ ಸಮುದಾಯದ ಮುಖಂಡ ನಾರಾಯಣಸ್ವಾಮಿ ಹಾಜರಿದ್ದರು.

ಎಚ್‌ಡಿಕೆ ವಿರುದ್ದ ವಾಗ್ದಾಳಿ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗಂಭೀರತೆ ಇರುವ ರಾಜಕಾರಣಿಯಲ್ಲ. ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅವರು ನೀಡುತ್ತಿರುವ ಹೇಳಿಕೆಗಳು ಹಾಸ್ಯಾಸ್ಪದವಾಗಿವೆ ಎಂದ ಶ್ರೀರಾಮುಲು, ಅಧಿಕಾರ ಕಳೆದುಕೊಂಡ ಹತಾಶೆಯಿಂದ ಕುಮಾರಸ್ವಾಮಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಫೊಟೋ:28-ಕೆಎಲ್‌ಆರ್-13

ಕೋಲಾರ ಜಿಪಂ ಸದಸ್ಯೆ ರೂಪಶ್ರೀ ಮಂಜುನಾಥ್ ಅವರ ನರಸಾಪುರ ಸಮೀಪದಲ್ಲಿನ ನಿವಾಸಕ್ಕೆ ಸಚಿವ ಶ್ರೀರಾಮುಲು ಭೇಟಿ ನೀಡಿದ ಸಂದರ್ಭದಲ್ಲಿ ಮುಖಂಡರು ಅಭಿನಂದಿಸಿದರು. ಮಾಜಿ ಶಾಸಕ ವರ್ತೂರು ಪ್ರಕಾಶ್, ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net