ಅದಿರು ಸಾಗಣೆ ವಾಹನ ತಡೆದರೆ ಏನು ಮಾಡುತ್ತೀರಿ ?

15-SanduruP3
Published on

ಸಂಡೂರು: ರೈತರು ಜಾನುವಾರು ಮೇಯಿಸಲು ಕಾಡಿಗೆ ಹೋಗಲು ಅವಕಾಶ ನೀಡಬೇಕೆಂದು ಆರ್‌ಪಿಐಎಲ್ ಅಧಿಕಾರಿಗಳಿಗೆ ಸಹಾಯಕ ಆಯುಕ್ತ ಪ್ರಮೋದ್ ಸೂಚಿಸಿದರು.

ಚೆಕ್‌ಪೋಸ್ಟ್ ನಿರ್ಮಿಸಿ ರೈತರ ಸಂಚಾರಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲು ಕೇಳಿ ಬುಧವಾರ ಮಾತನಾಡಿದರು. ನೀವು ಉದ್ದಿಮೆದಾರರು ಎಲ್ಲಿಂದಲೋ ಬಂದು ರೈತರ ಜಮೀನಿನಲ್ಲಿ ಕಾರ್ಖಾನೆ ಸ್ಥಾಪಿಸಿದ್ದೀರಿ. ಈಗ ರೈತರಿಗೇ ದಾರಿ ಬಿಡುವುದಿಲ್ಲ ಎಂದರೆ ಹೇಗೆ ಎಂದು ಆರ್‌ಐಪಿಎಲ್ ಪ್ರತಿನಿಧಿಯನ್ನು ಪ್ರಶ್ನಿಸಿದರು. ಅದಿರು ಸಾಗಣೆಯಿಂದ ಸಾಕಷ್ಟು ತೊಂದರೆಯಾಗುತ್ತಿದ್ದರೂ ರೈತರು ಅದರ ಬಗ್ಗೆ ಮಾತನಾಡುತ್ತಿಲ್ಲ. ಓಡಾಡಲು ದಾರಿ ಬಿಡಿ ಎಂದು ಕೇಳುತ್ತಿದ್ದಾರೆ. ಒಂದು ವೇಳೆ ನೀವು ದಾರಿ ಬಿಡದೆ ಹೋದರೆ ರೈತರು ಅದಿರು ಸಾಗಣೆ ವಾಹನ ತಡೆಯುತ್ತಾರೆ ಆಗ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು.

ಎಲ್ಲವೂ ಕಾನೂನು ಎಂದರೆ ಆಗುವುದಿಲ್ಲ. ರೈತರು ಈ ದೇಶದ ಸಾರ್ವಭೌಮರಾಗಿದ್ದು, ಆ ನಂತರ ನೀವು ಉದ್ದಿಮೆದಾರರು ಎನ್ನುವುದನ್ನು ತಿಳಿದುಕೊಳ್ಳಿ. ರೈತರಿಗೆ ಮೊದಲ ಆದ್ಯತೆ ನೀಡಬೇಕು. ಚೆಕ್‌ಪೋಸ್ಟ್ ಗೇಟ್ ತೆಗೆದು ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಸಹಾಯಕ ಆಯುಕ್ತ ಪ್ರಮೋದ್ ಸೂಚಿಸಿದರು.

ರೈತರು, ಸಾರ್ವಜನಿಕರ ಹಿತದೃಷ್ಟಿಯಿಂದ ಉಪ ಸಮಿತಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಜನಸಂಗ್ರಾಮ ಪರಿಷತ್ ಹಾಗೂ ರೈತ ಸಂಘದ ಪದಾಧಿಕಾರಿಗಳಿಗೆ ಸಹಾಯಕ ಆಯುಕ್ತ ಭರವಸೆ ನೀಡಿದರು. ಜನಸಂಗ್ರಾಮ ಪರಿಷತ್ತಿನ ಪದಾಧಿಕಾರಿಗಳಾದ ಟಿ.ಎಂ.ಶಿವಕುಮಾರ್, ಶ್ರೀಶೈಲ ಆಲದಳ್ಳಿ, ಈರಣ್ಣ ಮೂಲಿಮನಿ, ರೈತಸಂಘದ ಮೌನೇಶ್, ಕಾಡಪ್ಪ, ಪರಮೇಶಿ, ಜಿ.ಕೆ.ನಾಗರಾಜ, ಮಂಜುನಾಥ್, ಅಚ್ಯುತ, ಧನುಂಜಯ, ರವಿ, ವೀರೇಂದ್ರ, ಪಂಪಣ್ಣ ಇತರರಿದ್ದರು.

ಕಂದಾಯ ಪ್ರದೇಶದ ರೈತರ ಬಂಡಿ ದಾರಿಯಲ್ಲಿ ಸರ್ಕಾರದ ಅನುಮತಿಯಿಲ್ಲದೆ ಆರ್‌ಪಿಐಎಲ್ ಕಂಪನಿ ಚೆಕ್‌ಪೋಸ್ಟ್ ನಿರ್ಮಿಸಿ ರೈತರ ಸಂಚಾರ ನಿರ್ಬಂಧಿಸಿದೆ. ಈ ಕುರಿತು ಜಿಲ್ಲಾಧಿಕಾರಿಗೆ ಜನಸಂಗ್ರಾಮ ಪರಿಷತ್ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಚಿಸಿರುವ ಅಧಿಕಾರಿಗಳ ಉಪಸಮಿತಿ ತಾಲೂಕಿನ ರಣಜೀತ್‌ಪುರಕ್ಕೆ ಭೇಟಿ ನೀಡಿತ್ತು. ಉಪಸಮಿತಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net