

ಬೆಳಗಾವಿ: ಕನಿಷ್ಠ ವೇತನ ಕಾಯ್ದೆ, ವೇತನ ಪಾವತಿ ಕಾಯ್ದೆ, ಉಪದಾನ ಪಾವತಿ ಕಾಯ್ದೆಯಡಿ ದಾಖಲಾದ ಪ್ರಕರಣಗಳನ್ನು ಕಾರ್ಮಿಕ ಅದಾಲತ್-2.0 ಕಾರ್ಯಕ್ರಮದಡಿ ಪರಿಹರಿಸಿಕೊಳ್ಳುವಂತೆ ಆಡಳಿತವರ್ಗ, ಕಾರ್ಮಿಕ ಸಂಘದ ಪ್ರತಿನಿಧಿಗಳು ಹಾಗೂ ಕಾರ್ಮಿಕರುಗಳಿಗೆ ಬೆಳಗಾವಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ವೆಂಕಟೇಶ ಶಿಂಧಿಹಟ್ಟಿ ಸೂಚಿಸಿದರು.
ಕಾರ್ಮಿಕ ಇಲಾಖೆಯಲ್ಲಿ ಬಾಕಿ ಇರುವ ಪ್ರಕರಣಗಳ ವಿಲೇವಾರಿಗೆ ಆಗಸ್ಟ್ 15ರ ವರೆಗೆ ಮಜಗಾವಿಯ ಕಾರ್ಮಿಕ ಭವನದಲ್ಲಿ ಕಾರ್ಮಿಕ ಅದಾಲತ್-2.0 ಕಾರ್ಯಕ್ರಮ ಜರುಗಲಿರುವ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ನ್ಯಾಯಾಧೀಶರೂ ಆಗಿರುವ ಮುರಳಿ ಮೋಹನ ರೆಡ್ಡಿ ಅವರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ದಾಖಲಾಗಿರುವ ವಿವಿಧ ಕ್ಲೇಮ್ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಹಾಯಕ ಕಾರ್ಮಿಕ ಆಯುಕ್ತ ಮೊಹಮ್ಮದ ಅನ್ಸಾರಿ, ಕಾರ್ಮಿಕ ಅಧಿಕಾರಿ ಉಪ ವಿಭಾಗ-1ರ ಮಹೇಶ ಕುಳಲಿ, ಕಾರ್ಮಿಕ ಅಧಿಕಾರಿ ಉಪ ವಿಭಾಗ-2ರ ತರನ್ನುಂ ಬೆಂಗಾಲಿ, ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ಸಂಘಟನೆಯ ಮುಖಂಡರು, ವಕೀಲರು ಕಾರ್ಮಿಕರು ಇದ್ದರು.