ಅದಾನಿ ಸಂಸ್ಥೆ ವಿರುದ್ಧ ತನಿಖೆಗೆ ಒತ್ತಾಯ- ಬೀದಿಗಿಳಿದ ಕಮ್ಯುನಿಸ್ಟ್ ಕಾರ್ಯಕರ್ತರು

IMG-20230214-WA0006.jpg
Published on

ದಾವಣಗೆರೆ: ಅದಾನಿ ಸಮೂಹ ಸಂಸ್ಥೆಯ ವಿರುದ್ಧದ ಆಪಾದನೆಗಳ ಬಗ್ಗೆ ಸುಪ್ರೀಂಕೋರ್ಟ್ ಅಥವಾ ಜಂಟಿ ಸಂಸದೀಯ ಸಮಿತಿ ನೇತೃತ್ವದಲ್ಲಿ ಉನ್ನತ ತನಿಖೆ ನಡೆಸಲು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮಂಡಳಿಯು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.

ಪಕ್ಷದ ಜಿಲ್ಲಾ ಕಚೇರಿಯಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ತೆರಳಿ, ಅಲ್ಲಿನ ಅಧಿಕಾರಿಗಳ ಮೂಲಕ ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ಕೇಂದ್ರ ಸರ್ಕಾರವು, ಬ್ಯಾಂಕ್-ವಿಮಾ ಕ್ಷೇತ್ರದ ಜನರ ಸಾವಿರಾರು ಕೋಟಿ ರೂ. ಹೂಡಿಕೆಯನ್ನು ಅದಾನಿ- ಅಂಬಾನಿಯಂತಹ ಕಾರ್ಪೋರೇಟಿಗರಿಗೆ ಧಾರೆ ಎರೆದಿದೆ. ಅಮೆರಿಕಾದ ಹೂಡಿಕೆ ಸಂಸ್ಥೆ ಹಿಂಡನ್‌ಬರ್ಗ್, ಉದ್ಯಮಿ ಗೌತಮ್ ಅದಾನಿ ಸಮೂಹ ಸಂಸ್ಥೆ ವಿರುದ್ಧ ಅಕ್ರಮ ವಂಚನೆಯ ಗಂಭೀರ ಆರೋಪ ಮಾಡಿದೆ.

ಈಗಾಗಲೇ ಕೋಟ್ಯಂತರ ಭಾರತೀಯರು ಜೀವವಿಮೆ ನಿಗಮದಲ್ಲಿ ಕೂಡಿಟ್ಟ ಹಣವನ್ನು ಅದಾನಿ ಸಮೂಹ ಸಂಸ್ಥೆಯಲ್ಲಿ ಕೇಂದ್ರ ಸರ್ಕಾರ ಹೂಡಿಕೆ ಮಾಡಿದೆ. ಅಲ್ಲದೆ ಎಸ್‌ಬಿಐ ಇತರೆ ಬ್ಯಾಂಕ್‌ಗಳು ಅದಾನಿಗೆ ಭಾರಿ ಮೊತ್ತದ ಸಾಲ ನೀಡಿದೆ. ಅದಾನಿ ವಿರುದ್ಧದ ಆರೋಪದಿಂದಾಗಿ ತೀವ್ರ ಆತಂಕ ಸೃಷ್ಟಿಯಾಗಿದೆ ಎಂದು ಹೇಳಿದರು.

ಕೇಂದ್ರದ ಬಜೆಟ್‌ನಲ್ಲಿ ನಿರುದ್ಯೋಗ, ಬಡತನ, ಬೆಲೆಏರಿಕೆ ತಡೆಗಟ್ಟುವ ಯೋಜನೆಗಳಿಲ್ಲ. ಕಾರ್ಪೋರೇಟ್-ಬಂಡವಾಳಶಾಹಿಗಳ ಹಿತವನ್ನೇ ಆದ್ಯತೆಯಾಗಿಸಿಕೊಂಡ ಸರ್ಕಾರ, ಶಿಕ್ಷಣ-ಆರೋಗ್ಯ ಕ್ಷೇತ್ರದ ಖಾಸಗೀಕರಣಕ್ಕೆ ಮುಂದಾಗಿದ್ದು, ಇವುಗಳ ಅನುದಾನ ಕಡಿತಗೊಳಿಸಿದೆ. ಐಸಿಎಂಆರ್ ಲ್ಯಾಬ್, ನರ್ಸಿಂಗ್ ಕಾಲೇಜುಗಳನ್ನು ಖಾಸಗಿಗೆ ವಹಿಸಲು ನಿರ್ಧರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಸುರಕ್ಷ, ಉದ್ಯೋಗ ವೇತನ, ಉದ್ಯೋಗ ಖಾತ್ರಿಯಂತಹ ಯೋಜನೆಗಳಿಗೆ ಹೆಚ್ಚು ಅನುದಾನ ನೀಡಿಲ್ಲ. ಪೆಟ್ರೋಲ್, ಡೀಸೆಲ್, ರಸಗೊಬ್ಬರ ಬೆಲೆ ಇಳಿಕೆ ಪ್ರಸ್ತಾಪ ಮಾಡಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಸಹ ಕಾರ್ಯದರ್ಶಿ ಎಚ್.ಜಿ.ಉಮೇಶ್, ಆವರಗೆರೆ ವಾಸು, ಆನಂದರಾಜ್, ಕೆ.ಎಚ್.ಹನುಮಂತಪ್ಪ, ಸುರೇಶ್ ಯರಗುಂಟೆ, ಬಸವರಾಜಪ್ಪ, ಟಿ.ಎಸ್.ನಾಗರಾಜ, ಸರೋಜಾ, ಎಸ್.ಎಸ್.ಮಲ್ಲಮ್ಮ, ಎಚ್.ಪಿ.ಉಮಾಪತಿ, ಟಿ.ಎಚ್.ನಾಗರಾಜಪ್ಪ ಇತರರಿದ್ದರು.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net