ಅದಮಾರು ಮಠ 55 ಲಕ್ಷ ರೂ. ದೇಣಿಗೆ

admar
Published on

ಉಡುಪಿ: ಪ್ರಧಾನ ಮಂತ್ರಿಯವರ ಕರೊನಾ ಸಂತ್ರಸ್ತರ ಪರಿಹಾರ ನಿಧಿಗೆ ಅದಮಾರು ಮಠ ಹಾಗೂ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ವತಿಯಿಂದ 55,55,555 ರೂ. ದೇಣಿಗೆಯನ್ನು ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಹಾಗೂ ಪರ್ಯಾಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿಯವರು ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ರಥಬೀದಿಯ ಅದಮಾರು ಮಠದಲ್ಲಿ ಶುಕ್ರವಾರ ಹಸ್ತಾಂತರಿಸಿದರು.

ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಮಾತನಾಡಿ, ಒಬ್ಬ ಮಾಡಿದ ತಪ್ಪಿನಿಂದ ವಿಶ್ವದ ಪ್ರತಿಯೊಬ್ಬರೂ ತಲೆ ಕೊಡುವ ಪ್ರಸಂಗ ಬಂದು ಜಗತ್ತಿಗೆ ದೊಡ್ಡ ಅನಾಹುತ ಬಂದಿದೆ. ಪ್ರಧಾನಿ ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಮಾಡುತ್ತಿರುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು. ಹೀಗಾಗಿ ದೇವರ ಪ್ರಸಾದ ರೂಪವಾಗಿ ದೇಣಿಗೆ ನೀಡಿದ್ದೇವೆ. ದೇಶದ ಈ ಸಂಕಷ್ಟ ಕಾಲದಲ್ಲಿ ಸರ್ಕಾರಕ್ಕೆ ಯಾವುದೇ ಮೂಲಗಳಿಂದ ತೆರಿಗೆ ರೂಪದ ಆದಾಯ ಇರುವುದಿಲ್ಲ. ಆದರೆ ವಿವಿಧ ಇಲಾಖೆಗಳ ಖರ್ಚು ಸಾರ್ವಜನಿಕರ ಆರೋಗ್ಯದ ಖರ್ಚುಗಳು ಇರುತ್ತವೆೆ. ಇದಕ್ಕೆ ವಾರದಲ್ಲಿ ಮೂರೂ ಹೊತ್ತಿನ ಊಟವನ್ನು ಬಿಟ್ಟು ಅದರ ಉಳಿತಾಯವನ್ನು ಕಷ್ಟದಲ್ಲಿರುವವರಿಗೆ ಹಂಚಬಹುದು. ಎಲ್ಲರ ಪರಿಶ್ರಮದಿಂದ ವಿಶ್ವದಲ್ಲಿಯೇ ಭಾರತ ದೇಶ ಪ್ರಥಮ ಕರೊನಾ ಮುಕ್ತ ದೇಶವಾಗಿ, ವಿಶ್ವಗುರುವಾಗಿ ಹೊರಹೊಮ್ಮಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.

ಉಡುಪಿ ಶಾಸಕ ರಘುಪತಿ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಉಪಸ್ಥಿತರಿದ್ದರು.

ಕಿಟ್ ವಿತರಣೆ: ಪರ್ಯಾಯ ಅದಮಾರು ಮಠ ಹಾಗೂ ಕೃಷ್ಣ ಮಠದಿಂದ ಈಶಪ್ರಿಯ ತೀರ್ಥ ಸ್ವಾಮೀಜಿ ಪಿಎಂ ಕೇರ್ ನಿಧಿಗೆ ಈಗಾಗಲೇ 2 ಲಕ್ಷ ರೂ. ನೀಡಿದ್ದಾರೆ. ಜತೆಗೆ ಕೃಷ್ಣ ಮಠದ ವತಿಯಿಂದ ದಿನವಹಿ ಸಾಮಗ್ರಿಗಳ 1,000 ಕಿಟ್ ಹಾಗೂ ಮಠದ ಆಡಳಿತದಲ್ಲಿರುವ ಕುಂಜಾರುಗಿರಿ ದೇವಸ್ಥಾನದಿಂದ 250 ಕಿಟ್‌ಗಳನ್ನೂ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net