

ಸಂಬರಗಿ: ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಹಾಗೂ ಅಮ್ಮಾಜೇಶ್ವರಿ ಏತ ನೀರಾವರಿ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳಿಸುವ ಮೂಲಕ ಅಥಣಿ ಉತ್ತರ ಮತ್ತು ಪೂರ್ವ ಭಾಗದಲ್ಲಿ ಹಸಿರು ಕ್ರಾಂತಿ ಮಾಡಿಯೇ ತೀರುತ್ತೇವೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಸಮೀಪದ ಅರಳಿಹಟ್ಟಿ ಗ್ರಾಮದಲ್ಲಿ ಬಸವೇಶ್ವರ ಏತ ನೀರಾವರಿ ಯೋಜನೆ ಮೊದಲನೇ ಹಂತದಲ್ಲಿ ನೀರು ತುಂಬಿದ ಹಿನ್ನೆಲೆ ಕೆರೆಗೆ ಸೋಮವಾರ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಲವಾರು ವರ್ಷಗಳಿಂದ ಬರಗಾಲಪೀಡಿತ ಗ್ರಾಮಕ್ಕೆ ಈ ಯೋಜನೆ ಮಹತ್ವದ್ದಾಗಿದೆ. ಸರ್ಕಾರ ಮಟ್ಟದಲ್ಲಿ ಸತತ ಪ್ರಯತ್ನದ ಫಲವಾಗಿ ಅನುದಾನ ಬಿಡುಗಡೆಯಾಗಿ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡು ಗಡಿಭಾಗಕ್ಕೆ ನೀರು ಬಂದಿದೆ. ಜೂನ್ ಒಳಗೆ ಇನ್ನುಳಿದ ಕಾಮಗಾರಿ ಪೂರ್ಣಗೊಂಡು ನೀರು ಹರಿಸುತ್ತೇವೆ. ಪೂರ್ವ ಭಾಗದ ಮಹಾರಾಷ್ಟ್ರದ ಸಿಂಧೂರ ಗ್ರಾಮದ ಬಳಿ ರಾಜ್ಯದ ಕೆರೆಗೆಳು ತುಂಬಿ ಎರಡು ಕ್ಷೇತ್ರದಲ್ಲಿ ಹಸಿರು ಕ್ರಾಂತಿ ಮಾಡಲಾಗುವುದು ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಬಸವರಾಜ ಪಾಟೀಲ ಮಾತನಾಡಿ, 70 ವರ್ಷಗಳಿಂದ ಗ್ರಾಮದಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ಇತ್ತು. ಶಾಸಕರ ಪ್ರಯತ್ನದಿಂದ ಅರಳಿಹಟ್ಟಿ ಗ್ರಾಮದ ಕೆರೆಗೆ ನೀರು ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಶಾಸಕ ರಾಜು ಕಾಗೆ, ಮಹಾಂಕಾಳಿ ಸಕ್ಕರೆ ಕಾರ್ಖಾನೆ ಅಧ್ಯಕ್ಷೆ ಅನಿತಾ ಸಗರೆ, ವಿನಾಯಕ ಬಾಗಡಿ, ಖಂಡೆರಾವ ಗೋರ್ಪಡೆ, ಅಣ್ಣಾಸಾಹೇಬ ನಿಸಾಳ, ಬಸವರಾಜ ಅಂಗಡಿ, ಶಿವಾನಂದ ತೇಲಿ, ಪಿಕೆಪಿಎಸ್ ಅಧ್ಯಕ್ಷ ನಿಜಗುಣಿ ಮಗದುಮ್, ತಾನಾಜಿ ಶಿಂಧೆ, ವಿಶಾಲ ನಿಂಬಾಳ, ಸಂಜಯ ಅದಾಟಿ ಇತರರಿದ್ದರು.