ಅಥಣಿ ಶಿವಯೋಗಿ ಶ್ರೀ ಘನ ವ್ಯಕ್ತಿತ್ವವುಳ್ಳವರು

Shivayogi
Published on

ಚಿತ್ರದುರ್ಗ: ಬಸವಾದಿ ಶಿವಶರಣರ ಗುಣ ಸ್ವಭಾವಗಳು ಹಾಗೂ ಅವರ ಘನವ್ಯಕ್ತಿತ್ವವು ಅಥಣಿ ಮುರುಘೇಂದ್ರ ಶಿವಯೋಗಿ ಶ್ರೀ ಅವರಲ್ಲೂ ಅಡಕವಾಗಿತ್ತು ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಬಣ್ಣಿಸಿದರು.

ಶ್ರೀಮಠದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಥಣಿ ಮುರುಘೇಂದ್ರ ಶಿವಯೋಗಿ ಸ್ವಾಮೀಜಿ ಅವರ 190ನೇ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಗುರು, ಜಗದ್ಗುರು ಆಗುವುದು ಬಹುಶಃ ಸುಲಭದ ಕೆಲಸ. ಆದರೆ, ಶಿವಯೋಗಿ ಆಗುವುದು ಕಠಿಣದ ಹಾದಿ. ಅದು ತ್ಯಾಗದ ಸ್ಥಾನ. ಆ ಸವಾಲನ್ನು ಎದುರಿಸಿ ವಿಶ್ವಭಾತೃತ್ವ, ಸಮರ್ಪಣಾ ಮತ್ತು ಸಮ ಭಾವದೊಂದಿಗೆ ಸಕಲ ಜೀವರಾಶಿಗಳಿಗೆ ಲೇಸನ್ನೆ ಬಯಸುವ ಮೇರು ಗುಣ ಅವರಲ್ಲಿತ್ತು ಎಂದರು.

ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಮುರುಘೇಂದ್ರ ಶಿವಯೋಗಿ ಸ್ವಾಮೀಜಿ ಕುರಿತು ಪದಗಳಲ್ಲಿ ವರ್ಣಿಸುವುದು ಕಷ್ಟದ ಕೆಲಸ. ಅವರು ಶಿವಯೋಗ ಸಾಧನೆಯ ಮೂಲಕ ಎತ್ತರದ ಸ್ಥಾನಕ್ಕೇರಿದರು. 12ನೇ ಶತಮಾನದ ಸಿದ್ಧರಾಮ ಶಿವಯೋಗಿ ಶ್ರೀ, ಎಡೆಯೂರು ಸಿದ್ಧಲಿಂಗ ಶಿವಯೋಗಿ ಶ್ರೀ, 19ನೇ ಶತಮಾನದ ಅಥಣಿಯ ಮುರುಘೇಂದ್ರ ಶಿವಯೋಗಿ ಶ್ರೀ ನಾಡಿನ ಪ್ರಮುಖ ಶಿವಯೋಗಿಗಳಾಗಿದ್ದಾರೆ ಎಂದು ಬಣ್ಣಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ ಕಟ್ಟಿ, ಪ್ರಾಚಾರ್ಯ ನಾಗರಾಜ್, ಉಮೇಶ್ ಸಂಗಪ್ಪ ಪತ್ತಾರ್, ಶಿಕ್ಷಕರಾದ ಕೊಟ್ರಮ್ಮ ಗಡ್ಡೆಪ್ಪನವರ್, ಶಿವಮೂರ್ತಯ್ಯ, ಗಿರೀಶಾಚಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net