ಅತ್ಯಾಚಾರಿಗೆ ೨೦, ಸಹಾಯಕ ತಂದೆಗೆ ೧೦ ವರ್ಷ ಜೈಲು

court
Published on

ಕಲಬುರಗಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ೨೦ ವರ್ಷ ಜೈಲು ಮತ್ತು ಆತನಿಗೆ ಸಹಾಯ ಮಾಡಿದ ತಂದೆಗೆ ೧೦ ವರ್ಷ ಜೈಲು ಶಿಕ್ಷೆ ವಿಧಿಸಿ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಪೋಕ್ಸೋ) ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಆದೇಶಿಸಿದ್ದಾರೆ. ಯಲ್ಲಪ್ಪ ಯಡ್ರಾಮಿ, ದೇವಪ್ಪ ಯಡ್ರಾಮಿ ಶಿಕ್ಷೆಗೆ ಒಳಗಾದ ಅಪರಾಧಿಗಳು.
ಜೇವರ್ಗಿ ತಾಲೂಕಿನ ಗ್ರಾಮದ ಬಾಲಕಿಯನ್ನು ೨೦೨೩ ಮಾ.೨೬ರಂದು ಮಧ್ಯರಾತ್ರಿ ಪ್ರೀತಿಸುವ ನೆಪದಲ್ಲಿ ಅಪರಾಧಿ ಯಲ್ಲಪ್ಪನು ಬಾಲಕಿಯನ್ನು ಒತ್ತಾಯಪೂರ್ವಕವಾಗಿ ಗ್ರಾಮದಿಂದ ಕರೆದುಕೊಂಡು ಹೋಗಿದ್ದಾನೆ. ಅದಕ್ಕೆ ಆತನ ತಂದೆ ದೇವಿಂದ್ರಪ್ಪ ಯಡ್ರಾಮಿ ಸಹಕಾರ ನೀಡಿ, ಕಲಬುರಗಿವರೆಗೆ ರೈಲು ಹತ್ತಿಸಿದ್ದ. ನಂತರ ರೈಲಿನಲ್ಲಿ ಬಾಲಕಿಯನ್ನು ಪುಣೆಗೆ ಕರೆದುಕೊಂಡು ಹೋಗಿದ್ದ ಯಲ್ಲಪ್ಪ ಅಲ್ಲಿಯೇ ಅಕ್ಕನ ಮನೆಯಲ್ಲಿ ೨೦೨೩ ಮಾ.೩ರಂದು ಅತ್ಯಾಚಾರ ಎಸಗಿದ್ದಾನೆ. ನಂತರ ಮಾ.೨೭ರಿಂದ ೩೦ರವರೆಗೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಇತನ ವಿರುದ್ಧ ಜೇವರ್ಗಿ ಪೊಲೀಸ್ ಠಾಣೆ ಸಿಪಿಐ ಭೀಮನಗೌಡ ಎ.ಬಿರಾದಾರ ಪೋಕ್ಸೋ ಅಡಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು ಯಲ್ಲಪ್ಪನಿಗೆ ೨೦ ವರ್ಷ ಜೈಲು, ೨೦ ಸಾವಿರ ರೂ. ದಂಡ. ಆತನ ತಂದೆ, ಕೃತ್ಯಕ್ಕೆ ಸಹಾಯ ಮಾಡಿದ ದೇವಿಂದ್ರಪ್ಪ ಯಡ್ರಾಮಿಗೆ ೧೦ ವರ್ಷ ಜೈಲು, ೧೦ ಸಾವಿರ ರೂ.ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ತುಪ್ಪದ ವಾದ ಮಂಡಿಸಿದ್ದರು. ನೆಲೋಗಿ ಠಾಣೆ ಸಿಬ್ಬಂದಿ ಬಸವರಾಜ ಪಾಟೀಲ್ ಸಾಕ್ಷಿಗಳನ್ನು ಕೋರ್ಟ್ಗೆ ಹಾಜರುಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net