

ಕಲಬುರಗಿ: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪಿಗೆ ೩೦ ವರ್ಷ, ಅತ್ಯಾಚಾರಕ್ಕೆ ಪ್ರಯತ್ನಿಸಿದ ಆರೋಪಿಯ ತಂದೆಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಪೋಕ್ಸೋ) ನ್ಯಾಯಾಲಯ ಎಸ್‌ಟಿ, ಎಸ್‌ಸಿ-೧ರ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಆದೇಶಿಸಿದ್ದಾರೆ.
ಚಿತ್ತಾಪುರ ಪಟ್ಟಣದ ಅತ್ಯಾಚಾರಿ ಸತೀಶ ಕಾಶಿಗೆ ೩೦ ವರ್ಷ ಜೈಲು ಶಿಕ್ಷೆ, ೨೦ ಸಾವಿರ ರೂ. ದಂಡ, ಅತ್ಯಾಚಾರಕ್ಕೆ ಯತ್ನಿಸಿದ ಸತೀಶನ ತಂದೆ ಸೂರ್ಯಕಾಂತ ಕಾಶಿಗೆ ದು ವರ್ಷ ಜೈಲು, ಮೂರು ಸಾವಿರ ರೂ. ದಂಡ ಕೋರ್ಟ್ ವಿಧಿಸಿದೆ.
ಬಾಲಕಿಗೆ ಒಂದು ವರ್ಷದಿಂದ ಹಿಂಬಾಲಿಸಿ, ಪ್ರೀತಿಸುತ್ತೇನೆ, ಮದುವೆ ಮಾಡಿಕೊಳ್ಳುತ್ತೇನೆ ಎಂದಿದ್ದು, ಬಾಲಕಿ ನಿರಾಕರಿಸಿದ್ದಾಳೆ. ಬಾಲಕಿ ಮನೆಯ ಅಂಗಳದಲ್ಲಿ ಮಲಗಿಕೊಂಡಾಗ ಸತೀಶನು ೨೦೨೨ ಮೇ ೫ರಂದು ಎಳೆದುಕೊಂಡು ಹೋಗಿ, ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಬಾಲಕಿ ಮನೆಯಲ್ಲಿ ತಿಳಿಸಿದ್ದು, ಮನೆಯವರು ದೂರು ಕೊಡಲು ಹೋದಾಗ, ಸತೀಶನ ತಂದೆ ಸೂರ್ಯಕಾಂತ ಸೇರಿ ಇತರರ ಸಮಕ್ಷಮದಲ್ಲಿ ನೊಂದ ಬಾಲಕಿಗೆ ೧೮ ವರ್ಷದ ನಂತರ ಮದುವೆ ಮಾಡಿಕೊಳ್ಳುವುದಾಗಿ ಒಪ್ಪಿಸಿದ್ದಾರೆ.
ಪುನಃ ಅಕ್ರಮ ಬಂಧನದಲ್ಲಿಟ್ಟು, ಅತ್ಯಾಚಾರಕ್ಕೆ ಯತ್ನಿಸಿದ ತಂದೆ: ೨೦೨೨ ಮೇ ೫ರಿಂದ ೨೦೨೩ ಮೇ ೧೪ರವರೆಗೆ ಬಾಲಕಿಯನ್ನು ಸತೀಶನ ಮನೆಯಲ್ಲಿ ಅಕ್ರಮದಲ್ಲಿ ಇಟ್ಟುಕೊಂಡು ಬಾಲಕಿಗೆ ನಿತ್ಯ ಹೊಡಿ ಬಡಿ ಮಾಡಿದ್ದಲ್ಲದೇ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ಸತೀಶನ ತಂದೆ ಸೂರ್ಯಕಾಂತನೂ ೨೦೨೩ ಮೇ ೧೨ರಂದು ರಾತ್ರಿ ಬಾಲಕಿಗೆ ಅತ್ಯಾಚಾರಕ್ಕೆ ಯತ್ನಿಸಿ, ಯಾರಿಗಾದರೂ ಹೇಳಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಭಯ ಹಾಕಿದ್ದಾನೆ. ಅಲ್ಲದೆ ಇತರರು ಕೂಡಿ ಬಾಲಕಿಗೆ ಕಿರುಕುಳ ನೀಡಿ, ಮನೆಕೆಲಸದವಳ ರೀತಿ ನಡೆಸಿಕೊಂಡಿದ್ದಾರೆ. ಈ ಕುರಿತು ತನಿಖೆ ನಡೆಸಿದ ತನಿಖಾಧಿಕಾರಿಗಳಾದ ಸಿಪಿಐ ಶಿವಾನಂದ ಅಂಬಿಗೇರ, ಪ್ರಕಾಶ ಯಾತನೂರ ಪೋಕ್ಸೋ ಕಾಯ್ದೆ ಅಡಿ ದೋಷಾರೋಪಣೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು, ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ನೊಂದ ಬಾಲಕಿಗೆ ಏಳು ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದ್ದಾರೆ. ಚಿತ್ತಾಪುರ ಠಾಣೆ ಸಿಬ್ಬಂದಿ ಸಿದ್ದಣ್ಣ ಸಾಕ್ಷಿದಾರರನ್ನು ಹಾಜರುಪಡಿಸಿದ್ದರು. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ತುಪ್ಪದ ವಾದಿಸಿದರು.