ಅತ್ಯಾಚಾರಿಗೆ 30 ವರ್ಷ ಜೈಲು ಶಿಕ್ಷೆ

High court logo
Published on

ಕಲಬುರಗಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ೩೦ ವರ್ಷ ಜೈಲು ಶಿಕ್ಷೆ ವಿಧಿಸಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಆದೇಶಿಸಿದ್ದಾರೆ. ಕಮಲಾಪುರ ತಾಲೂಕಿನ ಲಾಡಮುಗಳಿ ಗ್ರಾಮದ ಶಾಮರಾವ ಚಿಕ್ಕನಾಗಾಂವ (೨೪) ಶಿಕ್ಷೆಗೆ ಒಳಗಾದ ಅತ್ಯಾಚಾರಿ.
ನರೋಣಾ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿಯನ್ನು ೨೦೨೩ ಜ.೫ರಂದು ವೈಯಕ್ತಿಕವಾಗಿ ಮಾತನಾಡುವುದು ಬಾ ಎಂದು ಯಾರೂ ಇಲ್ಲದ ವೇಳೆ ಮನೆಗೆ ಕರೆಸಿ, ಅತ್ಯಾಚಾರ ಎಸಗಿದ್ದಾನೆ. ನಂತರವೂ ನಿರಂತರವಾಗಿ ಮನೆಗೆ ಕರೆಸಿ, ನಾನು ಹೇಳದಂತೆ ಕೇಳದಿದ್ದರೆ ಮರ್ಯಾದೆ ತೆಗೆಯುತ್ತೇನೆ, ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ, ಪದೇ ಪದೆ ಅತ್ಯಾಚಾರ ಎಸಗಿರುತ್ತಾನೆ. ೨೦೨೩ ಫೆ.೧೫ರಂದು ಬಹಿರ್ದೆಸೆಗೆ ತಾಯಿಯೊಂದಿಗೆ ಆಗಮಿಸಿದ್ದ ಬಾಲಕಿಯನ್ನು ಅಪಹರಿಸಿಕೊಂಡು ಬಾಗಲಕೋಟೆ ಜಿಲ್ಲೆಯ ಹುಲಗೇರಿಗೆ ಒಯ್ದು, ಅಲ್ಲಿ ಬಾಡಿಗೆ ಕೋಣೆಯಲ್ಲಿ ಕೂಡಿಟ್ಟು ಫೆ.೧೬ರಿಂದ ೨೨ರವರೆಗೆ ನಿತ್ಯ ಅತ್ಯಾಚಾರ ಎಸಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಈ ಕುರಿತು ತನಿಖಾಧಿಕಾರಿ ಸಿಪಿಐ ಭಾಸು ಚವ್ಹಾಣ್ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಯನಮನಪ್ಪ ಬಮ್ಮಣಗಿ ೩೦ ವರ್ಷ ಜೈಲು, ೨೦ ಸಾವಿರ ರೂ. ದಂಡ ವಿಧಿಸಿದ್ದಾರೆ. ನೊಂದ ಬಾಲಕಿಗೆ ಏಳು ಲಕ್ಷ ರೂ. ಪರಿಹಾರವನ್ನು ಕಾನೂನು ಪ್ರಾಧಿಕಾರದಿಂದ ನೀಡುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ವಾದಿಸಿದ್ದರು. ಪೊಲೀಸ್ ಸಿಬ್ಬಂದಿ ಶಶಿಕಾಂತ, ಬಸವರಾಜ ಸಾಕ್ಷಿದಾರರನ್ನು ಹಾಜರುಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net