ಅತ್ಯಾಚಾರಿಗೆ 20 ವರ್ಷ ಜೈಲು ಸಜೆ

jail.jpg
Published on

ದಾವಣಗೆರೆ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ ದಾವಣಗೆರೆಯ ವಿಶೇಷ ಪೋಕ್ಸೋ ನ್ಯಾಯಾಲಯವು 20 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.

ಹರಿಹರದ ನಾರಾಯಣ ಆಲಿಯಾಸ್ ಶ್ಯಾಮ್ ಶಿಕ್ಷೆಗೆ ಗುರಿಯಾದ ಅತ್ಯಾಚಾರಿ. ಶಾಲೆಗೆ ಹೋಗುತ್ತಿದ್ದ 16 ವರ್ಷದ ಬಾಲಕಿಯನ್ನು ಹಿಂಬಾಲಿಸುತ್ತಿದ್ದ ನಾರಾಯಣ, ಪ್ರೀತಿಸುವುದಾಗಿ ಹೇಳಿ ಪುಸಲಾಯಿಸಿದ್ದ. 2020ರ ಆಗಸ್ಟ್‌ನಲ್ಲಿ ಬಲವಂತವಾಗಿ ಬಾಲಕಿಯನ್ನು ಬೆಂಗಳೂರಿಗೆ ಕರೆದೊಯ್ದು ಆನೇಕಲ್ ಬಳಿಯ ಸಂಬಂಧಿಕರ ಮನೆಯಲ್ಲಿ ಇರಿಸಿದ್ದ. ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ.

ಹರಿಹರ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖಾಧಿಕಾರಿ ಎಂ.ಶಿವಪ್ರಸಾದ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು. ಎರಡು ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಮಂಗಳವಾರ, ಜಿಲ್ಲಾ ಮತ್ತು ಸತ್ರ ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶ ಎನ್. ಶ್ರೀಪಾದ್, ಅಪರಾಧಿಗೆ ಕಠಿಣ ಸಜೆ ಜತೆಗೆ 30 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ಪ್ರಕಟಿಸಿದರು.

ಜಿಲ್ಲಾ ಉಚಿತ ಕಾನೂನು ಸೇವಾ ಪ್ರಾಧಿಕಾರವು ಸಂತ್ರಸ್ತೆಗೆ ಪರಿಹಾರ ರೂಪವಾಗಿ 5 ಲಕ್ಷ ರೂ. ನೀಡುವಂತೆಯೂ ಆದೇಶಿಸಿದರು. ಸರ್ಕಾರದ ಪರ, ರೇಖಾ ಎಸ್. ಕೋಟೆಗೌಡರ್ ವಿಶೇಷ ಸರ್ಕಾರಿ ಅಭಿಯೋಜಕರಾಗಿ ವಕಾಲತ್ತು ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net