

ಪಾಂಡವಪುರ: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಅಪರಾಧಿಗೆ 11 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಅಧಿಕ ಸತ್ರ ಮತ್ತು ತ್ವರಿತಗತಿ (ಪೋಕ್ಸೋ ವಿಶೇಷ) ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎ. ನಾಗಜ್ಯೋತಿ ತೀರ್ಪು ನೀಡಿದ್ದಾರೆ.
ಮೊಗಣ್ಣೇಗೌಡ(60) ಶಿಕ್ಷೆಗೆ ಗುರಿಯಾದವನು. ಈತ ತನ್ನ ಮನೆ ಮುಂದೆ ಆಟವಾಡುತ್ತಿದ್ದ 15 ವರ್ಷದ ಅಂಗವಿಕಲ ಬಾಲಕಿಯನ್ನು ಮನೆಗೆ ಎಳೆದುಕೊಂಡು ಹೋಗಿ 2016ರಲ್ಲಿ ಲೈಂಗಿಕ ದೌರ್ಜನ್ಯವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಬುಧವಾರ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಪಾಂಡವಪುರ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಕೆ. ದೀಪಕ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪಿ.ಕೆ. ಶಕೀಲಾ ವಾದ ಮಂಡಿಸಿದ್ದರು.