

ಚಿತ್ರದುರ್ಗ: ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ದುಷ್ಕರ್ಮಿಗಳ ವಿರುದ್ಧ ನಿಸ್ಪಕ್ಷಪಾತ ತನಿಖೆ ಕೈಗೊಂಡು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಸಿಐಟಿಯು ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಮಹಿಳಾ ಕುಲಕ್ಕೆ ರಕ್ಷಣೆ ಒದಗಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಪಿಎಂಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಕೆಲಸದ ಸ್ಥಳಗಳಲ್ಲೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿವೆ. ಇದನ್ನು ತಡೆಗಟ್ಟಲು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಜೊತೆಗೆ ಕಾನೂನು ಮತ್ತು ಆಡಳಿತ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಆಗ್ರಹಿಸಿದರು.
ಪೋಕ್ಸೋ ಸೇರಿ ಸ್ತ್ರೀಯರ ಮೇಲಿನ ಎಲ್ಲ ಬಗೆಯ ದೌರ್ಜನ್ಯ ಪ್ರಕರಣಗಳನ್ನು ನ್ಯಾಯಾಲಯಗಳಲ್ಲಿ ತ್ವರಿತವಾಗಿ ವಿಚಾರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ತೀರ್ಪು ಪ್ರಕಟಿಸಬೇಕು. ಫಾಸ್‌ಟ್ರ್ಯಾಕ್ ವಿಶೇಷ ನ್ಯಾಯಾಲಯಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.
ನ್ಯಾಯಮೂರ್ತಿ ವರ್ಮಾ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸುವುದರ ಜೊತೆಗೆ ಮಹಿಳೆಯರು ಕಾರ್ಯನಿರ್ವಹಿಸುವೆಡೆ ಶುದ್ಧ ಕುಡಿಯುವ ನೀರು, ಶೌಚಗೃಹ, ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಬೇಕು. ಸಬಲೀಕರಣಕ್ಕಾಗಿ ರೂಪಿಸಿದ ಕಾನೂನು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕೋರಿದರು.
ಸಿಐಟಿಯು ಸಂಚಾಲಕರಾದ ಟಿ.ತಿಪ್ಪೇಸ್ವಾಮಿ, ಟಿ.ನಿಂಗಣ್ಣ, ಸಿ.ಕೆ.ಗೌಸ್‌ಪೀರ್, ಡಿ.ಎಂ.ಮಲಿಯಪ್ಪ, ಪದಾಧಿಕಾರಿಗಳಾದ ಎನ್.ನಿಂಗಮ್ಮ, ಇಂದ್ರಮ್ಮ, ನಿರ್ಮಲಮ್ಮ, ಬಿ.ಬೋರಮ್ಮ, ಮಂಜಮ್ಮ, ಜಯಲಕ್ಷ್ಮಿ, ತನುಜಾ, ಶಿವಮ್ಮ, ಗೌರಮ್ಮ, ಪಾರ್ವತಮ್ಮ, ವೀಣಾ, ರಾಜಮ್ಮ, ಇತರರಿದ್ದರು.