ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ

13 vikram 7
Published on

ಧಾರವಾಡ: ತಾಲೂಕಿನ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತಾಲೂಕಿನ ಬೋಗೂರ ಹಾಗೂ ಮಾದನಬಾವಿ ಗ್ರಾಮದ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಇಂತಹ ಘಟನೆಗಳು ದೇಶ, ರಾಜ್ಯದಲ್ಲಿ ಪದೇಪದೆ ನಡೆಯುತ್ತಿರುವುದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾನೂನು, ಸುವ್ಯವಸ್ಥೆ ವೈಫಲ್ಯವೇ ಕಾರಣ ಎಂದು ದೂರಿದರು.

ಜಿಲ್ಲೆಯ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಇದಲ್ಲದೆ ಮಾದನಬಾವವಿ ಪ್ರಕರಣ ಕುರಿತು ಬಾಲಕಿಯ ತಂದೆ ಗರಗ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದ ಸಂದರ್ಭದಲ್ಲಿ ಅಲ್ಲಿನ ಪಿಎಸ್​ಐ ಹಾಗೂ ಸಿಬ್ಬಂದಿ ನೊಂದವರ ಮೇಲೆಯೆ ದೌರ್ಜನ್ಯ ನಡೆಸಿದ್ದಾರೆ. ಹೀಗಾಗಿ ಪೊಲೀಸ್ ಅಧಿಕಾರಿ ಮೇಲೆ ಸಹ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಂತರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಪತ್ರ ರವಾನಿಸಿದರು.

ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ನಾಗರಾಜ ಗೌರಿ, ಶಾಂತಮ್ಮ ಗುಜ್ಜಳ, ಉಳವಯ್ಯಾ ಚಿಕ್ಕೊಪ್ಪ, ರವಿವರ್ಮ ದೇಸಾಯಿ, ಈರಪ್ಪ ಏಣಗಿ, ಆನಂದ ಸಿಂಗನಾಥ, ವಸಂತ ಅರ್ಕಾಚಾರಿ, ಗೌರಿ ನಾಡಗೌಡ, ಪ್ರಶಾಂತ ಕೇಕರೆ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net