

ಮೈಸೂರು: ಮಹಿಳೆಯ ಘನತೆಯ ರಕ್ಷಣೆ ಮಾಡುವುದಾಗಿ ಹೇಳುವ ಪ್ರಧಾನಿಗಳು ಒಂದೆಡೆ ಅತ್ಯಾಚಾರಿಗಳು, ಭ್ರಷ್ಟಾಚಾರಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಂವಿಧಾನ ರಕ್ಷಣಾ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಗಾಂಧಿ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಗುಜರಾತ್‌ನ ಬಿಲ್ಕಿಸ್ ಬಾನು ಗುಂಪು ಅತ್ಯಾಚಾರ, ಕೊಲೆ ಅಪರಾಧಿಗಳ ಬಿಡುಗಡೆ ಮಾಡಿರುವುದು ಖಂಡನಾರ್ಹ ಎಂದು ಟೀಕಿಸಿದರು.
ಭೀಕರವಾಗಿ ಅತ್ಯಾಚಾರ, ಕೊಲೆ ಮಾಡಿದ ಆರೋಪಿಗಳಲ್ಲಿ ಯಾವ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ. ಮಹಿಳೆಯ ಘನತೆ ಕಾಪಾಡುವುದಾಗಿ ಹೇಳಿಕೊಳ್ಳುವ ಪ್ರಧಾನಿ ನರೇಂದ್ರಮೋದಿ ಅವರು ಈ ಬಗ್ಗೆ ಮೌನ ತಾಳಿದ್ದು, ತಲೆ ತಗ್ಗಿಸುವ ವಿಚಾರ ಎಂದು ಆರೋಪಿಸಿದರು.
ಕಾಣುತ್ತದೆ. ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದವರನ್ನು ಸನ್ನಡತೆ ಎಂದು ಪರಿಗಣಿಸಬಾರದು ಎಂದು ಪ್ರಧಾನ ಮಂತ್ರಿಗಳ ನೇತೃತ್ವದ ಸಚಿವ ಸಂಪುಟದಲ್ಲಿಯೇ ನಿರ್ಣಯವಾಗಿತ್ತು. ಆದರೆ ಮೋದಿ ಅವರದೇ ರಾಜ್ಯ, ಸರ್ಕಾರ ಇರುವ ಗುಜರಾತ್‌ನಲ್ಲಿ ಕೇಂದ್ರ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದೆ ಎಂದು ಟೀಕಿಸಿದರು.
ಚುನಾವಣೆಗಳು ಹತ್ತಿರ ಬರುತ್ತಿವೆ, ಬಿಜೆಪಿ ಮತ್ತೆ ದೇವಸ್ಥಾನ, ಗಡಿ, ಸೈನಿಕರು ಎಂಬ ಭಾವನಾತ್ಮಕ ವಿಷಯ ಮುನ್ನೆಲೆಗೆ ತಯರಲು ಹೊರಟಿದೆ. ಇಂತಹ ಪ್ರಕರಣ ಮುಂದೆ ರೂಢಿಯಾಗುವ ಅಪಾಯವಿರುವುದರಿಂದ ಯಾರಿಗೂ ಕಾನೂನಿನ ಭಯ ಇರುವುದಿಲ್ಲ. ಆದ್ದರಿಂದ ಆರೋಪಿಗಳನ್ನು ಬಿಡುಗಡೆ ಮಾಡದೆ ಸಾಯುವವರೆಗೂ ಜೀವಾವಧಿ ಅಥವಾ ಮರಣ ದಂಡನೆ ವಿಧಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಭ್ರಷ್ಟಾಚಾರಿಗಳ ವಿರುದ್ಧ ಮಾತನಾಡಲು ಎಲ್ಲರೂ ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಹೋರಾಟಗಾರರೂ ಬೀದಿಗೆ ಬರಲು ಹೆದರುತ್ತಿದ್ದಾರೆ. ಬಿಲ್ಕಿಸ್ ಬಾನು ಪ್ರಕರಣದಲ್ಲಿ ಎಲ್ಲರೂ ನೊಂದ ಮಹಿಳೆಯ ಹೆಸರನ್ನೇ ಪ್ರಸ್ತಾಪ ಮಾಡುತ್ತಾರೆ. ಆದರೆ 11 ಜನ ಅತ್ಯಾಚಾರಿಗಳ ಹೆಸರು, ವಿಚಾರ ಎಲ್ಲೂ ಪ್ರಸ್ತಾಪವಾಗುತ್ತಿಲ್ಲ ಎಂದು ಟೀಕಿಸಿ ಸನ್ನಡತೆ ಮೇಲೆ ಬಿಡುಗಡೆಗೊಂಡವರ ಹೆಸರನ್ನು ಬಹಿರಂಗವಾಗಿ ಘೋಷಿಸಿದರು.
ವಿಜಯಪುರ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಸಬೀಹಾ ಭೂಮೀಗೌಡ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ವಿಮಲ, ರಂಗಾಯಣದ ಮಾಜಿ ನಿರ್ದೇಶಕ ಜನಾರ್ದನ(ಜನ್ನಿ), ವಿವಿಧ ಸಂಘಟನೆಗಳ ಮುಖಂಡರಾದ ಕೆ.ಬಸವರಾಜು, ಜಗದೀಶ್ ಸೂರ್ಯ, ಸೀಮಾ, ವಿಜಯಕುಮಾರ್, ತನ್ವೀರ್ ಪಾಷ, ಸೈಯದ್ ಕಲೀಂ ಇತರರು ಇದ್ದರು.