

ದೇವದುರ್ಗ: ಕಲಬುರಗಿ ಜಿಲ್ಲೆಯ ಯಡ್ರಾಮಿ ಠಾಣೆ ವ್ಯಾಪ್ತಿಯಲ್ಲಿ 11 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಶಿಕ್ಷಕನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಪಟ್ಟಣದ ಮಿನಿವಿಧಾನಸೌಧ ಮುಂದೆ ಗೋರಸೇನೆ ಸಂಘಟನೆ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಸಮಾಜದಲ್ಲಿ ಗುರುವಿಗೆ ದೇವರ ಸ್ಥಾನಮಾನವಿದೆ. ಆದರೆ, ವಿದ್ಯಾರ್ಥಿಗಳನ್ನು ಮಕ್ಕಳಂತೆ ಭಾವಿಸಿ ಶಿಕ್ಷಣ ನೀಡಿ ಮಾರ್ಗದರ್ಶನ ತೋರಬೇಕಾದ ಶಿಕ್ಷಕನೇ ಅತ್ಯಾಚಾರಿ ಆಗಿರುವುದು ಖಂಡನೀಯ. ಖಾಸಗಿ ಶಾಲೆ ಶಿಕ್ಷಕ ಹಾಜಿ ಮಲಂಗ್ ಗಣಿಯಾರ್ ಮೃಗೀಯ ವರ್ತನೆ ಕ್ಷಮಿಸಲಾಗದ ಕೃತ್ಯವಾಗಿದೆ. ಇಂಥ ಘಟನೆಯಿಂದ ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸಲು ಭಯಪಡುವ ವಾತಾವರಣ ಸೃಷ್ಟಿಯಾಗಲಿದೆ ಎಂದರು.
ಶಿಕ್ಷಕ ಹಾಜಿ ಮಲಂಗ್ ಗಣಿಯಾರ್‌ಗೆ ಗಲ್ಲುಶಿಕ್ಷೆ ವಿಧಿಸಬೇಕು. ವಿದ್ಯಾರ್ಥಿನಿ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು. ಮನೆಯ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಆಗ್ರಹಿಸಿದರು.