

ಕಲಬುರಗಿ: ಆಟೋ ಹತ್ತಿದ ಮಹಿಳೆಯನ್ನು ಅಪಹರಿಸಿ ಹಲ್ಲೆ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ ಅಪರಾಧಿಗೆ ಏಳು ವರ್ಷ ಜೈಲು, ೭೫ ಸಾವಿರ ರೂ. ದಂಡ ವಿಧಿಸಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ.ಡಿ. ಕರೋಶಿ ತೀರ್ಪು ನೀಡಿದ್ದಾರೆ. ಆಸೀಫ್ ಪಾಶಾ ಶಿಕ್ಷೆಗೆ ಒಳಗಾದ ಅಪರಾಧಿ. ೨೦೨೧ರ ಸೆ.೨೭ರಂದು ಮಹಿಳೆ ಚಿತ್ತಾಪುರದಿಂದ ಆಗಮಿಸಿ ನಗರದ ಖಾಸಗಿ ಕಾಲೇಜಿನಲ್ಲಿ ಬಿಎ ಅಂತಿಮ ವರ್ಷದ ಪರೀಕ್ಷೆ ಬರೆದು ಮಿಜಬಾ ನಗರದಲ್ಲಿನ ಗೆಳತಿ ಮನೆಗೆ ಹೊರಟಿದ್ದಳು. ಖರ್ಗೆ ಪೆಟ್ರೋಲ್ ಬಂಕ್ ವೃತ್ತದಿಂದ ಬಸ್ ನಿಲ್ದಾಣಕ್ಕೆ ಹೋಗಲು ಆಟೋ ಹತ್ತಿದ್ದು, ಚಾಲಕ ಆಸೀಫ್ ಪಾಶಾ ಬಸ್ ನಿಲ್ದಾಣ ಬದಲು ಬುದ್ಧ ವಿಹಾರದತ್ತ ಚಲಾಯಿಸಿದ್ದಾನೆ. ನಿರ್ಜನ ಪ್ರದೇಶದಲ್ಲಿ ಆಟೋ ನಿಲ್ಲಿಸಿ ಹಲ್ಲೆ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಜನರು ಬರುವುದನ್ನು ನೋಡಿ ಬಿಟ್ಟು ಓಡಿ ಹೋಗಿದ್ದಾನೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇನ್‌ಸ್ಪೆಕ್ಟರ್ ದಿಲೀಪಕುಮಾರ ಸಗರ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸಿ.ಡಿ. ಕರೋಶಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಹಯಾಳಪ್ಪ ಬಳಬಟ್ಟಿ ವಾದ ಮಂಡಿಸಿದ್ದರು.