ಅತ್ಯಾಚಾರ ಖಂಡಿಸಿ ಬಂದ್ ನಾಳೆ

guru Bandari
Published on

ಕಲಬುರಗಿ: ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಗ್ರಾಮವೊಂದರಲ್ಲಿ ಮಾದಿಗ ಸಮುದಾಯದ ೧೫ ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿ ೨೦ ದಿನವಾದರೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಮಾದಿಗ ದಂಡೋರಾ ಮೀಸಲಾತಿ ಹೋರಾಟ ಸಮಿತಿ ಯುವ ಸೇನೆ ಅಧ್ಯಕ್ಷ ಗುರುರಾಜ ಭಂಡಾರಿ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರ ವೈಫಲ್ಯ, ಬಹಿಷ್ಕಾರ ಖಂಡಿಸಿ ಸೆ.೩೦ರಂದು ಯಾದಗಿರಿ ಬಂದ್‌ಗೆ ಕರೆ ನೀಡಲಾಗಿದೆ. ತನಿಖೆ ನಡೆಸುವಲ್ಲಿ ಪೊಲೀಸರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ತನಿಖೆಗೆ ವೇಗ ನೀಡಬೇಕು, ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕು, ಮಾದಿಗ ಸಮುದಾಯದ ಕುಟುಂಬಗಳನ್ನು ಬಹಿಷ್ಕಾರ ಮಾಡಿದವರನ್ನು ಗುಂಡಾ ಕಾಯ್ದೆ ಅಡಿ ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಪ್ರಕರಣವನ್ನು ನಿರ್ವಹಿಸುವಲ್ಲಿ ನಿರ್ಲಕ್ಷಿಸಿದ ಪೊಲೀಸರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಆಶಾಗಳು, ಅಂಗನವಾಡಿ ಕಾರ್ಯಕರ್ತೆಯರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಲು ಆಗ್ರಹಿಸಿದ್ದಾರೆ. ಸೆ.೩೦ರಂದು ಬೃಹತ್ ಪ್ರತಿಭಟನೆ ನಡೆಸಿ, ಯಾದಗಿರಿ ಬಂದ್ ಮಾಡಲಾಗುವುದು ಎಂದು ಹೇಳಿದರು.
ರಾಜು ಹದನೂರ, ಸುಂದರ ಸಗರ, ಮಲ್ಲು ಕೊಡಂಬಲ್, ನಾಗೀಂದ್ರ ಆರ್. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net