

ವಿಜಯಪುರ: ಮುದ್ದೇಬಿಹಾಳ ತಾಲೂಕಿನ ಘಾಳಪೂಜಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಾವಲುಗಾರ ಕೆಲಸ ನಿರ್ವಹಿಸುತ್ತಿದ್ದ ಭೀಮಬಾಯಿ ಸಂಗಪ್ಪಾ ಚಲವಾದಿ ಮೇಲೆ ನಡೆದ ಆತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೇಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ರೈತ ಪರ ಹೋರಾಟಗಾರ ಭೀಮಶಿ ಕಲಾದಗಿ ಮಾತನಾಡಿ, ಘಾಳಪೂಜಿ ಶಾಲೆಯಲ್ಲಿ ಕಳೆದ ಆರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಭೀಮಾಬಾಯಿ ಮೇಲೆ 2023 ಜು.29 ರಂದು ಅತ್ಯಾಚಾರ ನಡೆದಿದೆ. ಮಾತ್ರವಲ್ಲ, ಕೊಲೆ ಮಾಡಲಾಗಿದೆ. ಅದೇ ಗ್ರಾಮದ ಮೇಲ್ಜಾತಿಯ ಬಸವರಾಜ ರಾಜು, ಪ್ರವೀಣ, ವಿರೇಶ, ಆಮರೇಶ ನಾಗರಬೆಟ್ಟ ಸೇರಿ ಈ ಕೃತ್ಯ ಎಸಗಿದ್ದಾರೆ. ಈಗಾಗಲೇ ಪ್ರಕರಣ ದಾಖಲಾಗಿದ್ದು, ತನಿಖೆ ಜವಾಬ್ದಾರಿಯನ್ನು ಸಿಬಿಐಗೆ ವಹಿಸಬೇಕೆಂದರು. ಮುಂದುವರಿದು ಸರ್ಕಾರ ಭೀಮಾಬಾಯಿ ಕುಟುಂಭಕ್ಕೆ 25 ಲಕ್ಷ ರೂ.ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.
ಸಂಘಟನೆ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ರಾಜ್ಯ ಜಂಟಿ ಕಾರ್ಯದರ್ಶಿ ಹುಲಗಪ್ಪ ಎಚ್. ಚಲವಾದಿ, ಸಿಐಟಿಯು ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಗೇರ, ಸಿಐಟಿಯು ಜಿಲ್ಲಾ ಪ್ರಧಾನಕಾರ್ಯದಶಿ ಲಕ್ಷ್ಮಣ ಹಂದ್ರಾಳ, ಬಸವರಾಜ ರಕ್ಕಸಗಿ, ರಾಜ್ಯ ಜಂಟಿ ಕಾರ್ಯದರ್ಶಿ ರಾಜೇಶ ದೇಶಪಾಂಡೆ, ಕಾಶೀಮ ಆಲದಾಳ, ಲಕ್ಷ್ಮಣ ಮಸಳಿ, ಯಮನಪ್ಪ ಬಜಂತ್ರಿ, ರಾಮಚಂದ್ರ ಕೋಳಿ, ದಾನಮ್ಮ ಹೂಗಾರ, ಮಲ್ಲಮ್ಮ ಯಂಟಮಾನ, ನೂರಜಾನ ಎಲಗಾರ, ವೈಶಾಲಿ ಸಮಗೊಂಡ, ಗೌರಕ್ಕ ಬೀಳೂರ, ಶರಣಮ್ಮ ಜಟ್ಟಗಿ, ಮಲ್ಲಿಕಾರ್ಜುನ ಚಲವಾದಿ, ಭೀಮು ಚಲವಾದಿ ಮತ್ತಿತರರಿದ್ದರು.