ಅತ್ಯಾಚಾರ, ಕಠಿಣ ಕಾನೂನು ಜಾರಿಗೊಳಿಸಿ

PH 02
Published on

ಆಳಂದ: ಜಿಲ್ಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಬಸ್ ನಿಲ್ದಾಣದ ಎದುರು ಅತ್ಯಾಚಾರ ವಿರೋಧಿ ನಾಗರಿಕ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು, ಶಾಲಾ- ಕಾಲೇಜು ವಿದ್ಯಾರ್ಥಿಗಳು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ ಮಾತನಾಡಿ, ರಾಜ್ಯದಲ್ಲಿ ಪುಟ್ಟ ಮಕ್ಕಳ ಮೇಲೆ ಅತ್ಯಾಚಾರ ನಡೆದ ವರದಿಗಳು ಸಾಕಷ್ಟು ಬರುತ್ತಿವೆ. ಆರೋಪಿಗಳಿಗೆ ಶಿಕ್ಷೆಯಾಗುತ್ತಿಲ್ಲ ಎಂಬುದು ಕಳವಳಕಾರಿ ಸಂಗತಿಯಾಗಿದೆ. ಕೋರ್ಟ್ಗಳು ಇಂತಹ ಪ್ರಕರಣಗಳನ್ನು ವಿಶೇಷವೆಂದು ಪರಿಗಣಿಸಿ, ಕಿರಾತಕರಿಗೆ ಘೋರ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಇತ್ತೀಚೆಗೆ ಹಳ್ಳಿಯೊಂದರಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿದವರಿಗೆ ಉಗ್ರ ಶಿಕ್ಷೆ ನೀಡಬೇಕು. ಪೋಕ್ಸೋ ಕಾಯ್ದೆ ಪರಿಣಾಮಕಾರಿ ಜಾರಿಗೊಳಿಸಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಾಲಾ- ಕಾಲೇಜಿಗೆ ಹೋಗಿ ಬರಲು ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು. ಶಾಸಕ ಬಿ.ಆರ್.ಪಾಟೀಲ್ ಸಮಸ್ಯೆ ನಿವಾರಣೆಯತ್ತ ಚಿತ್ತಹರಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧವೂ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.

ಶ್ರೀ ಕೋರಣೇಶ್ವರ ವಿಶ್ವನಾಥ ಸ್ವಾಮೀಜಿ, ಡಾ.ಪ್ರಭು ಖಾನಾಪುರೆ, ಡಾ.ಮೀನಾಕ್ಷಿ ಬಾಳಿ ಮಾತನಾಡಿದರು. ಗ್ರೇಡ್-೨ ತಹಸೀಲ್ದಾರ್ ಭೀಮಣ್ಣ ಕುದುರಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಪ್ರಮುಖರಾದ ರಮೇಶ ಲೋಹಾರ, ಮೌಲಾ ಮುಲ್ಲಾ, ಪಾಂಡುರAಗ ಮಾವಿನಕರ, ರಾಜಮತಿ ಇಕ್ಕಳಕಿ, ಶಿವಲೀಲಾ ಹೆಬಳಿ, ಪೂಜಾ ಲೋಹಾರ, ಈರಣ್ಣ ಝಳಕಿ, ಸುಧಾಮ ಧನ್ನಿ, ಪುಷ್ಪಾವತಿ ಚಟ್ಟಿ, ಪ್ರಮೋದ ಪಾಂಚಾಳ, ಸಲ್ಮಾನ್ ಖಾನ್, ಸಿದ್ಧಾರ್ಥ ಹಸೂರೆ ಇತರರಿದ್ದರು. ಪಿಐ ಮಹಾದೇವ ಪಂಚಮುಖಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net