ಅತ್ಯಮೂಲ್ಯವಾದ ಕಣ್ಣುಗಳ ರಕ್ಷಣೆ ಅಗತ್ಯ

KCV
Published on

ಚಿತ್ರದುರ್ಗ: ಮಾನವನ ದೇಹದಲ್ಲಿ ಕಣ್ಣುಗಳಿಗೆ ಹೆಚ್ಚಿನ ಮಹತ್ವವಿದ್ದು, ಅವುಗಳ ರಕ್ಷಣೆ ಅತ್ಯಮೂಲ್ಯ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸಲಹೆ ನೀಡಿದರು.

ತಾಲೂಕಿನ ಗೋನೂರು ಗ್ರಾಪಂ ಆವರಣದಲ್ಲಿ ಸೋಮವಾರ ಆರೋಗ್ಯ ಇಲಾಖೆ, ತಾಪಂ, ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ, ಟಿಎಚ್‌ಒ ಕಚೇರಿ, ಶಂಕರ ಕಣ್ಣಿನ ಆಸ್ಪತ್ರೆ, ಬೆಂಗಳೂರು ದಿ ಟೈಟನ್ ಕಂಪನಿ ಲಿಮಿಟೆಡ್, ಗ್ರಾಪಂನಿಂದ ಹಮ್ಮಿಕೊಂಡಿದ್ದ ಬೃಹತ್ ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ, ಕನ್ನಡಕ ವಿತರಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂತಹ ಜನೋಪಯೋಗಿ ಕಾರ್ಯಕ್ರಮ ಒಂದು ದಿನಕ್ಕೆ ಮಾತ್ರ ಸೀಮಿತವಾಗಿಸದೆ, ಆಗಿಂದಾಗ್ಗೆ ತಾಲೂಕಿನ ಆಯ್ದ ಮೂರು ಗ್ರಾಮಗಳಲ್ಲಿ ನಡೆಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಅಲ್ಲದೆ, ಜನರ ಇತರೆ ಸಮಸ್ಯೆಗಳಿಗೂ ಸ್ಪಂದಿಸುತ್ತೇನೆ. ಸಂಚಾರಿ ಡಯಾಲಿಸಿಸ್ ಘಟಕ ಶೀಘ್ರದಲ್ಲೇ ಆರಂಭಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

ಹಾಸ್ಯ ನಟ ದೊಡ್ಡಣ್ಣ ಮಾತನಾಡಿ, ಕಳೆದ 13 ವರ್ಷಗಳಿಂದ ಕಣ್ಣುಗಳ ಆರೈಕೆಗಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು, ಈವರೆಗೂ ಒಟ್ಟು 1,025 ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಿ. ನೇತ್ರದಾನಕ್ಕೆ ಸಹಕರಿಸುವ ಮೂಲಕ ಅಂಧತ್ವ ನಿವಾರಣೆಗೆ ಕೈಜೋಡಿಸಿ ಎಂದು ಮನವಿ ಮಾಡಿದರು.

ಸೆ. 14ರಂದು ಸೊಂಡೆಕೊಳ ಗ್ರಾಪಂ ವ್ಯಾಪ್ತಿಯಲ್ಲಿ ಈ ಶಿಬಿರ ನಡೆಯಲಿದೆ. ಡಿಎಚ್‌ಒ ಡಾ.ಆರ್.ರಂಗನಾಥ್, ಟಿಎಚ್‌ಒ ಡಾ.ಜಯಶ್ರೀ, ರಾಷ್ಟ್ರೀಯ ಅಂಧತ್ವ ನಿವಾರಣ ಕಾರ್ಯಕ್ರಮದ ಅನುಷ್ಠಾನಾಧಿಕಾರಿ ಡಾ.ಚಂದ್ರಶೇಖರ್, ಗೋನೂರು ಗ್ರಾಪಂ ಅಧ್ಯಕ್ಷೆ ಗುಂಡಮ್ಮ, ತಾಪಂ ಇಒ ಹನುಮಂತಪ್ಪ, ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಪಿಡಿಒ ಎಚ್.ಯರ್ರಿಸ್ವಾಮಿ, ಶಂಕರ ಕಣ್ಣಿನ ಆಸ್ಪತ್ರೆಯ ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net