

ತರೀಕೆರೆ: ಅತ್ತಿಗನಾಳು ಗ್ರಾಮದ ಸ.ನಂ 122ರಲ್ಲಿ ಬೇಡರ ಕಣ್ಣಪ್ಪನ ಗದ್ದುಗೆಗೆ ಮೀಸಲಿರಿಸಿದ್ದ ಜಾಗಕ್ಕೆ ನಕಲಿ ದಾಖಲೆ ಸಷ್ಟಿಸಿ ಖಾತೆ ಮಾಡಿಕೊಂಡಿರುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿ ತಾಲೂಕು ವಾಲ್ಮೀಕಿ ಸಮಾಜದ ಪ್ರಮುಖರು ಬುಧವಾರ ಪಟ್ಟಣದ ಮಹಾತ್ಮ ಗಾಂಧಿ ವತ್ತದಲ್ಲಿ ಪ್ರತಿಭಟಿಸಿದರು.
ಮುಖ್ಯ ರಸ್ತೆ ಮೂಲಕ ಮೆರವಣಿಗೆ ಮೂಲಕ ಆಡಳಿತ ಸೌಧಕ್ಕೆ ತೆರಳಿ ತಹಸೀಲ್ದಾರ್ ವಿಶ್ವಜೀತ ಮೆಹತಾ ಅವರಿಗೆ ಮನವಿ ಸಲ್ಲಿಸಿದರು. ನಂತರ ವಾಲ್ಮೀಕಿ ಸಮುದಾಯದ ತಾಲೂಕು ಅಧ್ಯಕ್ಷ ಎಚ್.ಆರ್.ಗೋವಿಂದಪ್ಪ ಮಾತನಾಡಿ, ಅತ್ತಿಗನಾಳು ಗ್ರಾಮದ ಸ.ನಂ 122ರಲ್ಲಿರುವ ಜಾಗದಲ್ಲಿ ಬೇಡರ ಕಣ್ಣಪ್ಪನ ಗುತ್ತಿ (ಗದ್ದುಗೆ) ಇದ್ದು, ವಾಲ್ಮೀಕಿ ಸಮಾಜ ಈ ಜಾಗದಲ್ಲಿ ಅನಾದಿಕಾಲದಿಂದಲೂ ಬೇಡರ ಕಣ್ಣಪ್ಪನ ಜಾತ್ರಾ ಮಹೋತ್ಸವ ಸೇರಿ ವಿವಿಧ ಧಾರ್ಮಿಕ ಆಚರಣೆ ನಡೆಸುತ್ತ ಬಂದಿದೆ. 1999ನೇ ಸಾಲಿನವರೆಗೂ ಸರ್ಕಾರ ಈ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟಿತ್ತಾದರೂ, ಆ ಜಾಗವನ್ನು 2023-24ನೇ ಸಾಲಿನಲ್ಲಿ ಸೋಮಶೇಖರಪ್ಪ ಮತ್ತು ಸಿ.ಎಲ್.ಸಿದ್ದಪ್ಪ ಎಂಬುವವರು ನಕಲಿ ದಾಖಲೆ ಸಷ್ಟಿಸಿ ಅವರ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ದೂರಿದರು.
ನಕಲಿ ದಾಖಲೆ ಸಷ್ಟಿಸಿ ಸರ್ಕಾರಿ ಜಾಗ ಖಾತೆ ಮಾಡಿಸಿಕೊಂಡಿರುವ ಸೋಮಶೇಖರಪ್ಪ ಮತ್ತು ಸಿ.ಎಲ್.ಸಿದ್ದಪ್ಪ ಎಂಬುವವರ ವಿರುದ್ಧ ಅಧಿಕಾರಿಗಳು ಕ್ರಿಮಿನಲ್ ಕೇಸ್ ದಾಖಲಿಸಬೇಕು. ಇಬ್ಬರ ಹೆಸರಿಗೆ ಕಾನೂನು ಬಾಹಿರವಾಗಿ ಮಂಜೂರಾಗಿರುವ ಜಮೀನಿನ ಹಕ್ಕು ಬದಲಾವಣೆ ಪತ್ರ ರದ್ದುಪಡಿಸಬೇಕು. ಸರ್ಕಾರ 4.27 ಎಕರೆ ಜಾಗ ವಶಕ್ಕೆ ಪಡೆದು ವಾಲ್ಮೀಕಿ ಸಮಾಜದ ಧಾರ್ಮಿಕ ಕಾರ್ಯಕ್ಕೆ, ಸಾರ್ವಜನಿಕ ಉದ್ದೇಶದ ಬಳಕೆಗೆ ಮೀಸಲಿರಿಸಬೇಕು ಎಂದು ಒತ್ತಾಯಿಸಿದರು.
ತರೀಕೆರೆ ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಟಿ.ಗೋವಿಂದಪ್ಪ, ಕಾರ್ಯದರ್ಶಿ ಸಂತೋಷ್, ಅಜ್ಜಂಪುರ ತಾಲೂಕು ಅಧ್ಯಕ್ಷ ಆರ್.ಅಣ್ಣಪ್ಪ, ಉಪಾಧ್ಯಕ್ಷ ಯೋಗೀಶ್, ಪ್ರಮುಖರಾದ ರಮೇಶ್, ಹಾಲಪ್ಪ, ಪ್ರದೀಪ್, ಕೆ.ಎಸ್.ನಾಗರಾಜ್ ಮತ್ತಿತರರಿದ್ದರು.