

ಹಾಸನ: ಸಾಧನೆ ಮಾಡಲೇಬೇಕು ಎನ್ನುವ ಹಠದಲ್ಲಿ ರಂಗೋಲಿಯಲ್ಲಿ ಅತಿ ದೊಡ್ಡ ರಂಗೋಲಿ ಬಿಡಿಸಿದ ಹಿನ್ನೆಲೆಯಲ್ಲಿ ನೊಬೆಲ್ ವರ್ಡ್ ರೆಕಾರ್ಡ್ ವತಿಯಿಂದ ವಿಶ್ವ ದಾಖಲೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಪ್ರಶಸ್ತಿ ವಿಜೇತ ರಂಜಿತಾ ಅವರು ತಮ್ಮ ಸಾಧನೆ ಬಗ್ಗೆ ತಿಳಿಸಿದರು.
ನಾನು ಮೂಲತಃ ಹಾಸನ ನಗರದ ಬಿ. ಕಾಟಿಹಳ್ಳಿ ನಿವಾಸಿಯಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಏನಾದರೂ ಸಾಧನೆ ಮಾಡಬೇಕು ಎಂಬ ನಿಟ್ಟಿನಲ್ಲಿ ಯೋಚಿಸುತ್ತಿರುವಾಗ ತನಗೆ ಇಷ್ಟವಾದ ರಂಗೋಲಿಯಲ್ಲೇ ಸಾಧನೆ ಮಾಡಬೇಕು ಎಂಬ ನಿಟ್ಟಿನಲ್ಲಿ ನಡೆದ ಪ್ರಯತ್ನಕ್ಕೆ ಫಲ ಸಿಕ್ಕಿದೆ. 665.64 ಅಡಿ ಸುತ್ತಳತೆ ಜಾಗದಲ್ಲಿ ಬಿಳಿ ಬಣ್ಣದ 50 ಕೆಜಿ, 100 ಕೆಜಿ ವಿವಿಧ ಬಣ್ಣಗಳ ರಂಗೋಲಿ ಬಳಸಿ 3 ಗಂಟೆ 20 ನಿಮಿಷ ಸಮಯ ಬಳಸಿಕೊಂಡು ಬಿಡಿಸಿದ ದೊಡ್ಡ ವಿಸ್ತೀರ್ಣದ ಒಳಾಂಗಣ ಚುಕ್ಕಿ ರಂಗೋಲಿ ವಿಶ್ವ ದಾಖಲೆಯ ಮನ್ನಣೆ ಪಡೆದಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮೊದಲು ನಾನು ಸ್ಥಳೀಯವಾಗಿ ಗಣೇಶೋತ್ಸವ ಸೇರಿದಂತೆ ಇತರೆ ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಬಹುಮಾನವನ್ನು ಪಡೆದಿದ್ದೇನೆ. ಇದಾದ ನಂತರ ಏನಾದರೂ ಸಾಧನೆ ಮಾಡಲೇಬೇಕು ಎನ್ನುವ ಛಲದಲ್ಲಿ ರಂಗೋಲಿಯಲ್ಲೇ ಏನದರೂ ಸಾಧನೆ ಮಾಡಬೇಕೆಂದು ಇಚ್ಚಿಸಿದೆ. ಈ ಬಗ್ಗೆ ಅಂತರ್ಜಾಲದಲ್ಲಿ ಹುಡುಕಿದಾಗ ರಂಗೋಲಿ ಸಾಧನೆ ಬಗ್ಗೆ ಮಾಹಿತಿ ಲಭಿಸಿತು. ಬಳಿಕ ಇದನ್ನು ಸವಾಲಾಗಿ ಸ್ವೀಕರಿಸಿ ಬಿಡಿಸಿದ ರಂಗೋಲಿಗೆ ಈ ಪ್ರಶಸ್ತಿ ಸಿಕ್ಕಿದೆ. ನ.6 ರಂದು ಪ್ರಶಸ್ತಿ ಕೊರಿಯರ್ ಮೂಲಕ ನನಗೆ ತಲುಪಿತು ಎಂದು ಹೇಳಿದರು.