ಅತಿವೃಷ್ಟಿಗೆ 400 ಕೋಟಿ ರೂ. ಹಾನಿ

18-3
ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಜರುಗಿದ ಸಭೆಯಲ್ಲಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಡಿಸಿ ನಿತೇಶ ಪಾಟೀಲ, ಸಿಇಒ ದರ್ಶನ್ ಎಚ್.ವಿ. ಇತರರಿದ್ದರು.
Published on

ಬೆಳಗಾವಿ: ನದಿಗಳ ಪ್ರವಾಹ, ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಮನೆ, ಬೆಳೆ ಹಾಗೂ ಮೂಲಸೌಕರ್ಯ ಹಾನಿ ಸೇರಿ ಒಟ್ಟು 400 ಕೋಟಿ ರೂ. ಹಾನಿಯಾಗಿದೆ. ಸದ್ಯ 17 ಕೋಟಿ ರೂ. ಬೆಳೆಹಾನಿ ಪರಿಹಾರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಹಾಗೂ ಕೈಗೊಂಡ ಪರಿಹಾರ ಕ್ರಮಗಳ ಕುರಿತು ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗೋಡೆ ಕುಸಿದು, ಸಿಡಿಲು ಬಡಿದು ಹಾಗೂ ಮರ ಬಿದ್ದು ಹೀಗೆ ಐದು ಜನರು ಮೃತಪಟ್ಟಿದ್ದಾರೆ. ಆ ಕುಟುಂಬಗಳಿಗೆ ತಲಾ ಐದು ಲಕ್ಷ ರೂ. ಪರಿಹಾರ ನೀಡಲಾಗಿದೆ. 30 ಜಾನುವಾರುಗಳು ಮೃತಪಟ್ಟಿದ್ದು ಅವುಗಳಿಗೆ ಪರಿಹಾರ ನೀಡುವ ಕೆಲಸ ಪ್ರಗತಿ ಹಂತದಲ್ಲಿದೆ ಎಂದರು.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ 2,525 ಮನೆಗಳಿಗೆ ಹಾನಿಯಾಗಿದೆ. ಅದರಲ್ಲಿ ನೀರು ನುಗ್ಗಿ ಹಾನಿಯಾಗಿರುವ 678 ಮನೆಗಳ ಕುಟುಂಬಕ್ಕೆ ತಲಾ ಹತ್ತು ಸಾವಿರ ರೂ. ಪರಿಹಾರ ನೀಡಲಾಗಿದೆ. ಅಲ್ಪ ಪ್ರಮಾಣ ಹಾನಿಯಾಗಿರುವ 1 ಸಾವಿರಕ್ಕೂ ಅಧಿಕ ಮನೆಗಳಿಗೆ ತಲಾ 50 ಸಾವಿರ ರೂ., ಅರ್ಧ ಕುಸಿದು ಬಿದ್ದಿರುವ 500 ಮನೆಗಳಿಗೆ ತಲಾ 3 ಲಕ್ಷ ರೂ. ಹಾಗೂ ಪೂರ್ಣ ಪ್ರಮಾಣದಲ್ಲಿ ಬಿದ್ದಿರುವ ಮನೆಗಳಿಗೆ ತಲಾ 5 ಲಕ್ಷ ರೂ.ರಂತೆ ಪರಿಹಾರ ನೀಡುವ ಕೆಲಸ ಪ್ರಗತಿ ಹಂತದಲ್ಲಿದೆ.

ಅರ್ಹ ಸಂತ್ರಸ್ತರು ಪರಿಹಾರದಿಂದ ವಂಚಿತರಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈಗಾಗಲೇ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸೇರಿ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಹಾನಿ ವರದಿ ಸಲ್ಲಿಕೆ ಮಾಡಿದ್ದಾರೆ. ಜಮೀನುಗಳಲ್ಲಿ ನೀರು ಹೆಚ್ಚು ದಿನ ನಿಂತ ಪರಿಣಾಮ ತೋಟಗಾರಿಕೆ ಹಾಗೂ ತರಕಾರಿ ಬೆಳೆಗಳು ಸಂಪೂರ್ಣ ನಾಶಗೊಂಡಿರುತ್ತದೆ. ಆದ್ದರಿಂದ ಸಮೀಕ್ಷೆ ನಡೆಸುವಾಗ ಈ ಅಂಶಗಳನ್ನು ಪರಿಗಣಿಸಬೇಕು. ಅಲ್ಲದೆ, ಸಮೀಕ್ಷೆ ಬಳಿಕವೂ ಬೆಳೆಹಾನಿ ಸಂಭವಿಸಿರುವುದರಿಂದ ಅವುಗಳನ್ನು ಹಾನಿ ಪಟ್ಟಿಗೆ ಸೇರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ನಿತೀಶ ಪಾಟೀಲ, ಜಿಪಂ ಸಿಇಒ ದರ್ಶನ್ ಎಚ್.ವಿ., ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ, ಡಾ.ಈಶ್ವರ ಉಳ್ಳಾಗಡ್ಡಿ, ಉಪ ವಿಭಾಗಾಧಿಕಾರಿಗಳಾದ ರವೀಂದ್ರ ಕರಲಿಂಗಣ್ಣವರ, ಶಶಿಧರ ಬಗಲಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net