ಅತಿವೃಷ್ಟಿ ಹಾನಿ ಪರಿಹಾರಕ್ಕೆ ಸಿಎಂಗೆ ಮೊರೆ

surykanth meet to cm
Published on

ಬೀದರ್: ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಅತಿವೃಷ್ಟಿಯಿಂದ ಬೀದರ್ ತಾಲೂಕಿನಲ್ಲಿ ಆಗಿರುವ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿ ಸಂಬಂಧ ಸೂಕ್ತ ಪರಿಹಾರ ನೀಡುವಂತೆ ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಿದ ಅವರು, ತಿಂಗಳಲ್ಲೇ ಎರಡು ಸಲ ಅತಿವೃಷ್ಟಿ ಆಗಿರುವುದು ರೈತರು, ಸಾರ್ವಜನಿಕರನ್ನು ಸಂಕಷ್ಟಕ್ಕೆ ತಳ್ಳಿದೆ. ಸಮೃದ್ಧವಾಗಿ ಬಂದಿದ್ದ ಬಹುತೇಕ ಬೆಳೆಗಳು ನೀರುಪಾಲಾಗಿ ರೈತರು ಕಂಗಾಲಾಗಿದ್ದಾರೆ. ನಿಸರ್ಗದ ಹೊಡೆತದಿಂದ ನಲುಗಿದ ರೈತರಿಗೆ ಆದಷ್ಟು ಬೇಗ ಪರಿಹಾರ ಒದಗಿಸಿ ನೆರವಿಗೆ ಬರುವಂತೆ ಕೋರಿದ್ದಾರೆ.

ಕಂದಾಯ ಹಾಗೂ ಕೃಷಿ ಇಲಾಖೆ ನಡೆಸಿದ ಜಂಟಿ ಸಮೀಕ್ಷೆಯಲ್ಲಿ ಅತಿವೃಷ್ಟಿಗೆ ಬೀದರ್ ತಾಲೂಕಿನಲ್ಲಿ 33,359 ಹೆಕ್ಟೇರ್ ಬೆಳೆ ಹಾಳಾಗಿವೆ. ತಾಲೂಕಿನ ಒಟ್ಟು ಬಿತ್ತನೆ ಕ್ಷೇತ್ರದಲ್ಲಿ ಶೇ.70 ಬೆಳೆ ನಾಶವಾಗಿವೆ. ಸೋಯಾಬೀನ್ ಅತಿ ಹೆಚ್ಚು 16265 ಹೆಕ್ಟೇರ್ ಹಾಳಾಗಿದೆ. ಉದ್ದು 3161, ಹೆಸರು 3681, ತೊಗರಿ 7535, ಜೋಳ 1325 ಹಾಗೂ ಕಬ್ಬು 1704 ಹೆಕ್ಟೇರ್ ನಾಶವಾಗಿ ಕೈಗೆ ಬಂದು ತುತ್ತು ಬಾಯಿಗೆ ಇಲ್ಲ ಎಂಬಂತಾಗಿದೆ. ಸಂಕಷ್ಟದಲ್ಲಿರುವ ರೈತರಿಗೆ ತುರ್ತಾಗಿ ಪರಿಹಾರ ಒದಗಿಸಬೇಕು ಎಂದು ಗಮನ ಸೆಳೆದಿದ್ದಾರೆ.

ಮನವಿಪತ್ರ ಸ್ವೀಕರಿಸಿದ ಸಿಎಂ ಬಿಎಸ್ ವೈ, ಸೂಕ್ತ ಕ್ರಮಕ್ಕೆ ಕಂದಾಯ ಇಲಾಖೆ ಮತ್ತು ವಿಪತ್ತು ನಿರ್ವಹಣಾ ವಿಭಾಗಕ್ಕೆ ಸೂಚಿಸುವುದಾಗಿ ಅಭಯ ನೀಡಿದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ಸುಭಾಷ ಕಲ್ಲೂರ್, ಡಾ.ಶೈಲೇಂದ್ರ ಬೆಲ್ದಾಳೆ, ಪ್ರಮುಖರಾದ ಬಾಬು ವಾಲಿ, ಬಾಬುರಾವ ಕಾರಬಾರಿ, ಸೋಮನಾಥ ಪಾಟೀಲ್, ಜಗನ್ನಾಥ ಪಾಟೀಲ್ ಸಿರಕಟನಳ್ಳಿ, ಮಲ್ಲೇಶ ಗಣಪುರ ಇತರರಿದ್ದರು.

ಅತಿವೃಷ್ಟಿಗೆ ಬೀದರ್ ತಾಲೂಕು ಮಾತ್ರವಲ್ಲ, ಇಡೀ ಜಿಲ್ಲೆ ನಲುಗಿದೆ. ಜಿಲ್ಲೆಯಲ್ಲಿ 2,49,258 ಹೆಕ್ಟೇರ್ ಬೆಳೆಗಳು ಹಾನಿಗೊಳಗಾಗಿವೆ. 9 ಜನ, 63 ಜಾನುವಾರು ಪ್ರಾಣಹಾನಿ ಸಂಭವಿಸಿದೆ. ಸುಮಾರು 1673 ಮನೆ ಕುಸಿದಿವೆ. ಅತಿವೃಷ್ಟಿಪೀಡಿತ ಜಿಲ್ಲೆಗೆ ಅನುದಾನ ಒದಗಿಸಿ ನೊಂದವರ ನೆರವಿಗೆ ಬರಬೇಕು.| ಸೂರ್ಯಕಾಂತ ನಾಗಮಾರಪಳ್ಳಿ ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net